ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವ ಭರವಸೆಯ ಆಧಾರದಲ್ಲಿ ಅಧಿಕಾರಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಎಸ್‌ಸಿ/ಎಸ್‌ಟಿ ಜನಾಂಗದ ಅಭಿವೃದ್ಧಿಯ ಅನುದಾನವನ್ನು ಬಳಸಿ ತುಳಿತಕ್ಕೊಳಗಾದ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಅವರು ಸೋಮವಾರ ಶಿರಹಟ್ಟಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಶಿರಹಟ್ಟಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ದಿನಕ್ಕೊಂದು ಹಗರಣಗಳು ಬಯಲಿಗೆ ಬರುತ್ತಿವೆ. ವಾಲ್ಮೀಕಿ ನಿಗಮದಲ್ಲಿ ರೂ. 189 ಕೋಟಿ ಅವ್ಯವಹಾರ ನಡೆದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ 89 ಕೋಟಿ ಎಂದು ಒಪ್ಪಿಕೊಂಡಿದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ರಸ್ತೆ ಅಭಿವೃದ್ಧಿಪಡಿಸುವುದು ಹೋಗಲಿ ಗುಂಡಿಗಳಿಗೆ ಹಿಡಿ ಮಣ್ಣು ಹಾಕುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ, ಗ್ರಾ.ಪಂ ವ್ಯಾಪ್ತಿಗಳಲ್ಲಿ ಬೀದಿ ದೀಪ ಕೂಡ ಅಳವಡಿಸಿಲ್ಲ. ಇಂಥ ಸ್ಥಿತಿ ರಾಜ್ಯದಲ್ಲಿ ಎಂದಿಗೂ ಬಂದಿರಲಿಲ್ಲ ಎಂದು ದೂರಿದರು.
ಸದ್ಯದ ರಾಜಕೀಯ ಬೆಳವಣಿಗೆ ಗಮನಿಸಿದರೆ ಯಾವುದೇ ಹಂತದಲ್ಲಾದರೂ ಮಧ್ಯಂತರ ಚುನಾವಣೆ ಘೋಷಣೆಯಾಗುತ್ತದೆ. ಸರ್ಕಾರ ಭ್ರಷ್ಟಾಚಾರ, ಅವ್ಯವಹಾರದಲ್ಲಿ ಮುಳುಗಿ ಹೋಗಿದ್ದು, ಸರಳ ರೀತಿಯಲ್ಲಿ ಅಧಿಕಾರ ನಡೆಯಲು ಸಾಧ್ಯವೇ ಇಲ್ಲ ಎಂದು ಮಾರ್ಮಿಕ ಹೇಳಿಕೆ ನೀಡಿದರು.
ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯಲ್ಲಿ 250 ಬೂತ್‌ಗಳು ಬರುತ್ತಿದ್ದು, ಎಲ್ಲ ವರ್ಗ, ಎಲ್ಲ ಸಮಾಜ ಹಾಗೂ ಎಲ್ಲ ಸ್ಥರದ ಜನರ ಸದಸ್ಯತ್ವ ಆಗಬೇಕು. ಅಂದಾಗ ಮಾತ್ರ ಎಲ್ಲರನ್ನು ಒಳಗೊಂಡಂತೆ ಆಡಳಿತ ನೀಡಲು ಸಾಧ್ಯ, ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಯೋಜನೆ ದೊರೆಯಲು ಸಾಧ್ಯ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಎಂ.ಎಸ್. ಕರಿಗೌಡರ, ಫಕ್ಕಿರೇಶ ರಟ್ಟಿಹಳ್ಳಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಚಂದ್ರಕಾಂತ ನೂರಶೆಟ್ಟರ, ಗೂಳಪ್ಪ ಕರಿಗಾರ, ಪ್ರವೀಣ ಪಾಟೀಲ, ಅಕಬರ ಯಾದಗೀರಿ, ರಾಮಣ್ಣ ಕಂಬಳಿ, ಯಲ್ಲಪ್ಪ ಇಂಗಳಗಿ, ನಾಗರಾಜ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದವರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಬ್ಬರದ್ದೇ ಕಾಟ ಇತ್ತು. ಆದರೆ ಸಿದ್ದರಾಮಯ್ಯನವರು ನಂಬಿದವರೇ ನಿತ್ಯ ಸಿಎಂ ನಾನೇ ಆಗುತ್ತೇನೆ ಎಂದು ಒಳಗೊಳಗೆ ಕಾಡುತ್ತಿದ್ದಾರೆ. ಸಚಿವ ಸಂಪುಟದ ಮೇಲೆ ವಿಶ್ವಾಸವೇ ಇಲ್ಲದಂತಾಗಿದ್ದು, ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಎದುರಾಗಿರುವುದನ್ನು ನೋಡಿದರೆ ಕನಿಕರವಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.