ವಿಜಯಸಾಕ್ಷಿ ಸುದ್ದಿ, ಹಾವೇರಿ: ಆಧುನಿಕ ಕಾಲದಲ್ಲಿ ಬೇಕಾದಷ್ಟು ಪ್ರಗತಿಯನ್ನು ಕಂಡರೂ ಮನಸ್ಸಿಗೆ ಶಾಂತಿ-ನೆಮ್ಮದಿ ಇಲ್ಲ. ಶಿವಪೂಜೆ, ಶಿವ ಧ್ಯಾನದಿಂದ ಮಾನಸಿಕ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಗುತ್ತಲ ಪಟ್ಟಣದ ಶ್ರೀ ಹೇಮಗಿರಿ ಚನ್ನಬಸವೇಶ್ವರ ಶಿಲಾ ಮಠ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಭೌತಿಕವಾಗಿ ಬಹಳಷ್ಟು ಸಂಪತ್ತು ಸಂಪಾದಿಸಿದರೂ ಇರಬೇಕಾದ ಸಂತೃಪ್ತಿ, ಸಮಾಧಾನ ಇಲ್ಲ. ನಾಗರಿಕತೆಯ ನಾಗಾಲೋಟದಲ್ಲಿ ಮನುಷ್ಯ ಸಿಲುಕಿ ತೊಳಲಾಡುತ್ತಿದ್ದಾನೆ. ಗುರು ಕೊಟ್ಟ ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವಪೂಜೆಯಿಂದ ಪೂರ್ವ ಜನ್ಮದ ಕರ್ಮಗಳು ಕೂಡ ನಾಶವಾಗುತ್ತವೆ. ಪ್ರತಿಯೊಬ್ಬರು ಶಿವನನ್ನು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಂಡಿದ್ದಾರೆ. ಬ್ರಹ್ಮ ವಿಷ್ಣು ಸಕಲ ದೇವಾನುದೇವತೆಗಳು ಸಹ ಶಿವನನ್ನು ಪೂಜಿಸಿ ಸತ್ಫಲಗಳನ್ನು ಪಡೆದಿದ್ದಾರೆ. ಜಗತ್ತನ್ನು ವ್ಯಾಪಿಸಿರುವ ಭಗವಂತ ವೀರಶೈವರ ಕರದಲ್ಲಿ ಕರದಿಷ್ಟ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನೆ ಎಂದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗೂರ್ ಹಿರೇಮಠದ ಶಿವಯೋಗೀಶ್ವರ ಶ್ರೀಗಳು, ಗುತ್ತಲ ಅಗಡಿಯ ಗುರುಸಿದ್ಧ ಶ್ರೀಗಳು ಉಪಸ್ಥಿತರಿದ್ದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಕೋವಳ್ಳಿ ಮಠದ ಕೊಟ್ರಯ್ಯ ಚನ್ನವೀರಪ್ಪ ಕುರುವತ್ತಿ, ಅಂಗಡಿ ಕೊಟ್ರೇಶಪ್ಪ ಹಾಗೂ ಹೇಮಗಿರಿ ಮಠದ ಎಲ್ಲ ವಂಶಸ್ಥರು ಪಾಲ್ಗೊಂಡಿದ್ದರು.
ದೇಹವೇ ದೇವಾಲಯ, ಇಷ್ಟಲಿಂಗವೇ ಆರಾಧ್ಯ ದೈವವೆಂದು ಪೂಜಿಸುವ ಸಮುದಾಯ ಯಾವುದಾದರೂ ಇದ್ದರೆ ಅದು ವೀರಶೈವ ಲಿಂಗಾಯತ ಸಮಾಜ. ಅಂಗದ ಮೇಲೆ ಲಿಂಗ ಇದ್ದವರೆಲ್ಲರೂ ವೀರಶೈವ-ಲಿಂಗಾಯತರು. ಹೆಸರಿಗೆ ಲಿಂಗಾಯಿತರಾದರೆ ಸಾಲದು, ಆಚರಣೆಯೊಂದಿಗೆ ವೀರಶೈವ-ಲಿಂಗಾಯಿತ ಆಗಬೇಕೆಂಬುದು ಆಚಾರ್ಯರ ಮತ್ತು ಶರಣರ ಸದಾಶಯ ಆಗಿದೆ. ವೀರಶೈವ ತತ್ವ ಸಿದ್ಧಾಂತಗಳಿಗೆ ತಲೆಬಾಗಿ ಬರುವರೆಲ್ಲರೂ ಇಷ್ಟ ಲಿಂಗವನ್ನು ಪೂಜಿಸಬಹುದೆಂದು ನಿರೂಪಿಸಿದ್ದಾರೆ. ಗುತ್ತಲದ ಹೇಮಗಿರಿ ಮಠ ಭವ್ಯ ಶಿಲಾ ಮಠವಾಗಿ ನಿರ್ಮಾಣಗೊಂಡಿದ್ದು ತಮಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ ಎಂದು ರಂಭಾಪುರಿ ಶ್ರೀಗಳು ನುಡಿದರು.