ಗದಗ: ಮೈಕ್ರೋ ಫೈನಾನ್ಸ್ ಜನರ ಜೀವ ಹಿಂಡುತ್ತಿದ್ದು, ಮರಣ ಶಾಸನ ಬರೆಯುತ್ತಿವೆ. ಕರ್ನಾಟಕದಲ್ಲಿ ಸಾಲ ಕೊಟ್ಟವರ ಕಾಟಕ್ಕೆ ಐವರು ಬಲಿಯಾಗಿದ್ದಾರೆ. ಇನ್ನೂ ಹಲವರು ಊರು, ಮನೆಯನ್ನೇ ತೊರೆದಿದ್ದಾರೆ. ಫೈನಾನ್ಸ್ ಕಂಪನಿ ಹಾವಳಿ ಹೆಚ್ಚಾಗಿರುವ ಹೊತ್ತಲ್ಲೇ ಇದೀಗ ಮೀಟರ್ ಬಡ್ಡಿ ದಂಧೆ ಕೂಡ ಸದ್ದು ಮಾಡುತ್ತಿದೆ.
ಹೌದು ಗದಗ ಜಿಲ್ಲೆಯಲ್ಲಿ ಅಮಾನುಷ ಕೃತ್ಯ ನಡೆದಿದೆ.
ಅರೆಬೆತ್ತಲೆ ಮಾಡಿ ವ್ಯಕ್ತಿಗೆ ರಾತ್ರಿಯಿಡೀ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಡಿಸಿ ಮಿಲ್ ನಿವಾಸಿ ದಶರಥ ಬಳ್ಳಾರಿ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮಂಜು, ಮಂಜುನಾಥ, ಮಹೇಶ, ಹನುಮಂತ ಅವರಿಂದ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಒಂದು ಲಕ್ಷ ಸಾಲಕ್ಕಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಬಡ್ಡಿ ದಂಧೆಕೋರರು ದಶರಥ ಬಳ್ಳಾರಿ ಅವರನ್ನು ಸಿನಿಮೀಯ ರೀತಿ ಕರೆದೊಯ್ದು ರೂಂ ನಲ್ಲಿ ಕೂಡಿಹಾಕಿದ್ದಾರೆ. ಆನಂತರ ಆತನನ್ನು ಅರೆ ಬೆತ್ತಲೆ ಮಾಡಿ ರಾತ್ರಿಯಿಡೀ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದೇಹದ ತುಂಬೆಲ್ಲಾ ಬಾಸುಂಡೆ ಬರುವಂತೆ ಕೇಬಲ್ ವೈಯರ್, ಬೆಲ್ಟ್‌ನಿಂದ ಬೆನ್ನು ಹಾಗೂ ಕಾಲಿಗೆ ಹಲ್ಲೆ ಮಾಡಿದ್ದಾರೆ. ಸತತವಾಗಿ ಆರು ಗಂಟೆಗಳ ಕಾಲ ಬಾಯಿಗೆ ಬಟ್ಟೆ ಹಾಕಿ ದುಷ್ಕರ್ಮಿಗಳು ಥಳಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಗೆ ಎದ್ದೇಳಲು ಆಗದಂತೆ ಥಳಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ಹಲ್ಲೆಗೊಳದಾಗ ವ್ಯಕ್ತಿ ಹಲ್ಲೆಕೋರರಿಂದ ಎಸ್ಕೇಪ್ ಆಗಿ, ಜೀವ ಉಳಿಸಿಕೊಂಡು ಓಡಿಬಂದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದರಿಂದ ಗದಗ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಆದ್ರೆ ಈ ಘಟನೆ ಜನವರಿ 21 ರಂದು ರಾತ್ರಿ ನಡೆದಿದೆ. ದೂರು ದಾಖಲಾದ್ರೂ ಆರೋಪಿಗಳ ಬಂಧನವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಗದಗ-ಬೆಟಗೇರಿ ಅವಳಿ ನಗರದ ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವರಿಗೆ ಪೊಲೀಸರ ಭಯವೇ ಇಲ್ಲ. ಯಾರಿಗೆ ಹೇಳ್ತಿಯೋ ಹೇಳು ಎಂದು ಅವಾಜ್ ಹಾಕಿ ಹಲ್ಲೆ ಮಾಡಿದ್ದಾರೆ. ಇವ್ರಿಗೆ ಶಿಕ್ಷೆ ಆಗಬೇಕು ಎಂದು ನ್ಯಾಯಕ್ಕಾಗಿ ಕುಟುಂಬಸ್ಥರ ಒತ್ತಾಯಿಸಿದ್ದಾರೆ.