ಚಿತ್ರದುರ್ಗ:- ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿ ನಡೆಯುತ್ತಿದ್ದು, ಬಡ್ಡಿಗೆ ಹಣ ಪಡೆದ ಜನರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹಣ ಪಡೆದ ಮೇಲೆ ಮೀಟರ್ ಬಡ್ಡಿ ಕಟ್ಟಲು ಆಗದೇ ಜನತೆ ಪರದಾಡುತ್ತಿದ್ದಾರೆ.
ಅದರಂತೆ ಮೀಟರ್ ಬಡ್ಡಿ ದಂಧೆ ಕಿರುಕುಳದಿಂದ ಮಹಿಳೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ಇಲ್ಲಿನ ಚಿತ್ರದುರ್ಗದ ಹಿರಿಯೂರಿನಲ್ಲಿ ಜರುಗಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವೇದಾವತಿ ಬಡಾವಣೆಯ ನಿವಾಸಿ ಸರೋಜಮ್ಮ ಎಂದು ಗುರುತಿಸಲಾಗಿದೆ. ಮೃತ ಸರೋಜಮ್ಮ, ತಾನು ಪಡೆದ 60 ಸಾವಿರಕ್ಕೆ 2 ಲಕ್ಷ ಬಡ್ಡಿ ಕಟ್ಟಿದ್ದರು. ಆದರೂ ಅಸಲು ಹಾಗೂ ಬಡ್ಡಿ ಕಟ್ಟುವಂತೆ ಮೀಟರ್ ದಂಧೆಕೋರರು ನಿತ್ಯವೂ ಕಿರುಕುಳ ನೀಡುತ್ತಿದ್ದರಂತೆ. ಈ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣಾಗಿರುವ ಮಾಹಿತಿ ಲಭ್ಯವಾಗಿದೆ.
ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



