ಬೆಂಗಳೂರು: ನಗರದ ಮೆಟ್ರೋ ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ಹೆಚ್ಚಿನ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿರುವುದಾಗಿ ತಿಳಿದುಬಂದಿದೆ.
ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ. ಪಶ್ಚಿಮ ಬಂಗಾಳದ ಟೀಟಾಘರ್ ರೈಲು ಸಿಸ್ಟಮ್ಸ್ ಲಿಮಿಟೆಡ್ (ಟಿಆರ್ಎಸ್ಎಲ್) ಕಂಪನಿಯಿಂದ ಫೆಬ್ರವರಿ 18ರಂದು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿರುವ 20 ಡಿಟಿಜಿ (ಡಿಸ್ಟೆನ್ಸ್-ಟು-ಗೋ) ರೈಲುಗಳಲ್ಲಿ ಮೊದಲ ರೈಲನ್ನು ರವಾನಿಸಲಾಗಿದೆ.
ಈ ರೈಲು ಫೆಬ್ರವರಿ ಅಂತ್ಯದೊಳಗೆ ಪೀಣ್ಯ ಡಿಪೋಗೆ ತಲುಪಲಿದೆ. ಅಲ್ಲಿಗೆ ತಲುಪಿದ ನಂತರ ಆರು ಕೋಚ್ಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ಸಿದ್ಧಪಡಿಸಲಾಗುತ್ತದೆ. ನಂತರ ಸ್ಥಿರ ಹಾಗೂ ವಿದ್ಯುತ್ ವಲಯ ಪರೀಕ್ಷೆಗಳು ನಡೆಯಲಿದ್ದು,
ಮುಖ್ಯ ಮಾರ್ಗದಲ್ಲಿ ರಾತ್ರಿ ವೇಳೆ ಸುಮಾರು 750 ಕಿಲೋಮೀಟರ್ ಪ್ರಯೋಗಾತ್ಮಕ ಸಂಚಾರ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಚೀನಾದ ಸರ್ಕಾರಿ ಕಂಪನಿಯೊಂದಿಗೆ ರೂ. 1,578 ಕೋಟಿ ಮೌಲ್ಯದ ಒಪ್ಪಂದ ಮಾಡಲಾಗಿತ್ತು. ಒಟ್ಟು 36 ರೈಲುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿತ್ತು.
ಇದರಲ್ಲಿ 15 ರೈಲುಗಳು ಯೆಲ್ಲೋ ಲೈನ್ಗೆ ಮತ್ತು 21 ರೈಲುಗಳು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿದ್ದವು. ಎರಡು ಪ್ರೋಟೋಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದ್ದು, ಉಳಿದ ರೈಲುಗಳನ್ನು ಟಿಆರ್ಎಸ್ಎಲ್ ನಿರ್ಮಿಸುತ್ತಿದೆ.



