ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ಬೆನ್ನಲ್ಲೇ, ಇದೀಗ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಶೀಘ್ರವೇ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಪ್ರತಿ ವರ್ಷ ನೀರಿನ ದರವನ್ನು ಪರಿಷ್ಕರಿಸಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ, ಈ ಶಿಫಾರಸಿನ ಅನುಸಾರವಾಗಿ ನೀರಿನ ದರ ಏರಿಕೆಗೆ BWSSB ಮುಂದಾಗಿದೆ. ಎಲ್ಲವೂ ಯೋಜನೆಯಂತೆ ನಡೆದರೆ, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್‌ಗೆ ಕನಿಷ್ಠ 0.15 ಪೈಸೆಯಿಂದ ಗರಿಷ್ಠ 1 ಪೈಸೆಯವರೆಗೆ ನೀರಿನ ದರ ಹೆಚ್ಚಳ ಮಾಡಲಾಗಿತ್ತು. ವಾಣಿಜ್ಯ ಬಳಕೆಗೆ ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆಯವರೆಗೆ ದರ ಏರಿಕೆ ಜಾರಿಗೆ ಬಂದಿತ್ತು.
ಈ ಬಾರಿ ಕೂಡ ಶೇ.3ರಷ್ಟು ದರ ಏರಿಕೆ ಜಾರಿಯಾದರೆ, ಗೃಹ ಹಾಗೂ ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ನೀರಿನ ದರ ಏರಿಕೆ ಕುರಿತು ಅಂತಿಮ ನಿರ್ಧಾರವನ್ನು BWSSB ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.



