ಮುಂಬೈ: ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾನ್ಸನ್ & ಜಾನ್ಸನ್ ಕಂಪನಿಯ ಸಮೀಪದ ಎಲ್‌ಬಿಎಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಮೆಟ್ರೋ ಕಂಬದ ಸಿಮೆಂಟ್ ಭಾಗವು ಏಕಾಏಕಿ ಕುಸಿದು ಕೆಳಗೆ ಸಂಚರಿಸುತ್ತಿದ್ದ ಆಟೋರಿಕ್ಷಾ ಹಾಗೂ ಕಾರಿನ ಮೇಲೆ ಬಿದ್ದಿದೆ. ಸಿಮೆಂಟ್ ಗೋಡೆ ಬಿದ್ದ ಪರಿಣಾಮ ಎರಡು ವಾಹನಗಳು ಹಾನಿಗೊಳಗಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 12:20ರ ವೇಳೆಗೆ ಘಟನೆ ಸಂಭವಿಸಿದೆ. ಸಿಮೆಂಟ್ ಭಾಗ ಕುಸಿದ ಪರಿಣಾಮ ಆಟೋರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪಡೆದ ನಂತರ, ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ಮೆಟ್ರೋ ಪ್ರಾಧಿಕಾರದ ಸಿಬ್ಬಂದಿ, ವಾರ್ಡ್ ಸಿಬ್ಬಂದಿ ಹಾಗೂ 108 ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಸಂಚಾರ ದಟ್ಟನೆ ನಿಯಂತ್ರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಸ್ಥಳದಿಂದ ಮೆಟ್ರೋ ಪಿಲ್ಲರ್ ಅವಶೇಷಗಳನ್ನ ತೆರವುಗೊಳಿಸಲಾಯಿತು.



