ಬೆಂಗಳೂರು:- ಭಾರತದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ ಇದೀಗ ಮತ್ತೆ ದರ ಏರಿಕೆಗೆ ಮುಂದಾಗಿದೆ.
ಶೇ.5ರಷ್ಟು ಮೆಟ್ರೋ ಟಿಕೆಟ್ ಪ್ರಯಾಣ ದರ ದುಬಾರಿಯಾಗಿದ್ದು, ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಈಗಾಗಲೇ ಮೆಟ್ರೋ ಪ್ರಯಾಣಿಕರು ಬಿಎಂಆರ್ಸಿಎಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಎಂ.ಎಲ್ ಖಟ್ಟರ್ ಅವರನ್ನು ಭೇಟಿ ಮಾಡಿ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಮನವಿ ಮಾಡಿದ್ದಾರೆ.
ಲೆಕ್ಕಾಚಾರಗಳಲ್ಲಿ ವೈಪರೀತ್ಯಗಳು ಕಂಡುಬಂದಿದ್ದು, ಇದರಿಂದ ಗರಿಷ್ಠ ಟಿಕೆಟ್ ದರ 95 ರೂಪಾಯಿಗೆ ಏರಿಸಲಾಗುತ್ತಿದೆ. ಸರ್ಕಾರ ಈ ದೋಷಪೂರ್ಣ ದರ ಪರಿಷ್ಕರಣೆಯನ್ನು ಮುಂದುವರಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಸಚಿವ ಎಂ.ಎಲ್ ಖಟ್ಟರ್ ಅವರು ತೇಜಸ್ವಿ ಸೂರ್ಯ ಅವರ ಮನವಿಗೆ ಸ್ಪಂದಿಸಿ, ತಾತ್ಕಾಲಿಕವಾಗಿ ದರ ಏರಿಕೆಯನ್ನು ಸ್ಥಗಿತಗೊಳಿಸಲು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹೊಸ ಸಮಿತಿಯ ಮೂಲಕ ದರ ಪರಿಷ್ಕರಣೆ ಮಾಡಲು ಭರವಸೆ ನೀಡಿದ್ದಾರೆ.
ಈ ಮೂಲಕ ಪ್ರಯಾಣಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹಾಕದಂತೆ ಕ್ರಮ ಕೈಗೊಳ್ಳಲಾಗುವ ನಿರೀಕ್ಷೆ ಇದೆ.



