ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಎಂಜಿಎಂ ಫೌಂಡೇಶನ್ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಇದೀಗ ಎಲ್ಲೆಡೆ ಕಾಡುತ್ತಿರುವ ಡೆಂಘೀ ರೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಶನಿವಾರ ಹಮ್ಮಿಕೊಂಡಿತ್ತು. ಸಂಸ್ಥೆಯು ಈ ಜನಪರ ಕಾಳಜಿಯ ಹಾಗೂ ಮಾದರಿ ಕಾರ್ಯಕ್ರಮ ರೂಪಿಸಿ ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಎಂಜಿಎಂ ಫೌಂಡೇಶನ್, ಎಂಜಿಎಂ ಯೂನಿವರ್ಸಲ್ ಸ್ಕೂಲ್, ಮುಕ್ತಿ ಮಂದಿರ ಮಹರ್ಷಿ ಪ್ರಿ ಪ್ರೈಮರಿ ಸ್ಕೂಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡೆಂಘೀ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಮುಂಜಾನೆ ಪಟ್ಟಣದ ಶಿಗ್ಲಿ ನಾಕಾದಲ್ಲಿ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಿದರು.
ಜಾಥಾಕ್ಕೆ ಸಂಸ್ಥೆಯ ಮುಖ್ಯಸ್ಥ ಬಸವೇಶ ಮಹಾಂತ್‌ಶೆಟ್ಟರ್ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭವಾದ ಜಾಥಾ ಪೇಟೆ ಮಾರ್ಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 1ನ್ನು ತಲಪಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಹರಡುವಿಕೆ ಪ್ರಮಾಣ ಅಧಿಕವಾಗುತ್ತಿದ್ದು ಡೆಂಘೀ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಮೂಲಕ ರೋಗನಿಯಂತ್ರಣಕ್ಕೆ ಮುಂದಾಗಬೇಕು. ಪ್ರಸಕ್ತ ವರ್ಷದಲ್ಲಿ ಡೆಂಘೀ ಕಾಯಿಲೆ ಅಧಿಕವಾಗಿದ್ದು, ಲಾರ್ವಾ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಅಲ್ಲದೇ ಲಾರ್ವಾ ಸಮೀಕ್ಷೆ ವೇಳೆ ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸೊಳ್ಳೆಗಳ ಉತ್ಪತ್ತಿ ತಾಣಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ಸಂಪೂರ್ಣ ನಾಶಪಡಿಸುವ ವಿಧಾನವನ್ನೂ ಸಹ ತಿಳಿಸಿಕೊಡಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಡೆಂಘೀ ಜ್ವರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆ ಕಾಪಾಡಿಕೊಳ್ಳುವದು ಅವಶ್ಯ. ನಮ್ಮ ಸುತ್ತಲಿನ ಪರಿಸರ ಕಾಪಾಡುವ ನಿಟ್ಟಿನಲ್ಲಿ ಇಲಾಖೆಗಳೊಂದಿಗೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಎಂಜಿಎಂ ಫೌಂಡೇಷನ್ ಶಿಕ್ಷಣ ಸೇವೆಯ ಜತೆಗೆ ಪರಿಸರ, ಆರೋಗ್ಯ, ಸಾಮಾಜಿಕ, ಧಾರ್ಮಿಕ ಚಿಂತನೆಗಳ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಹಿತಿ ಪೂರ್ಣಾಜಿ ಖರಾಟೆ, ರಮೇಶ್ ನವಲೆ, ಎನ್.ಆರ್. ಸಾತಪೂತೆ, ಗಂಗಾಧರ ಪುರಾಣಿಕಮಠ, ಎಸ್.ಎಫ್. ಕೊಡ್ಲಿ, ಮುಖೋಪಾಧ್ಯಾಯೆ ಕವಿತಾ ಮೆಣಸಗಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು. ಶ್ವೇತಾ ಪೂಜಾರ ನಿರೂಪಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್. ಹಿರೇಮಠ ಡೆಂಘೀ ಕುರಿತು ಉಪನ್ಯಾಸ ನೀಡಿ, ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿ ನಾಲೆಗಳಲ್ಲಿ ಕಸಕಡ್ಡಿಗಳನ್ನು ಎಸೆಯದೇ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗದಂತೆ ನೋಡಿಕೊಳ್ಳಬೇಕು ಎಂದರು.