ಮುಂಬೈನ ವಾಂಖೆಡೆ ಕ್ರೀಂಡಾಂಗಣದಲ್ಲಿ ಸೋಮವಾರ ನಡೆದ IPL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ MI ತಂಡವು ತವರಲ್ಲಿ ಗೆಲುವಿನ ಖಾತೆ ತೆರೆದಿದೆ.
ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಕೇವಲ 116 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ ತಂಡಕ್ಕೆ 117 ಸುಲಭದ ರನ್‌ಗಳ ಗುರಿಯನ್ನು ನೀಡಿತು.
ಇನ್ನು ಈ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಕೇವಲ 12.5 ಓವರ್‌ಗಳಲ್ಲಿ 121 ರನ್‌ಗಳಿಸಿ 8 ವಿಕೆಟ್‌ಗಳಿಂದ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡದ ಈ ಗೆಲುವಿನಲ್ಲಿ ವೇಗಿ ಅಶ್ವನಿ ಕುಮಾರ್ ಮತ್ತು ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಪ್ರಮುಖ ಪಾತ್ರವಹಿಸಿದರು.
ಮುಂಬೈ ತಂಡವು ಆರಂಭದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಮೊದಲ ಕ್ರಮಾಂಕದಲ್ಲಿ ಬಂದ ರೋಹಿತ್ ಶರ್ಮಾ 13 ರನ್‌ಗೆ ಔಟ್ ಆದರು. ನಂತರ ಬಂದ ವಿಲ್ ಜಾಕ್ಸ್ 16 ಸಿಡಿಸಿ ಔಟ್ ಆದರು. ಆದರೆ ಆರಂಭಿಕ ಬ್ಯಾಟರ್ ರಿಕಲ್ಟನ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಸಿಡಿಸಿ ಕೆಕೆಆರ್ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಅಲ್ಲದೆ, ಕೊನೆಗೆ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಕೇವಲ 9 ಎಸೆತಗಳಲ್ಲಿ 27 ರನ್ ಸಿಡಿಸಿ ಗಮನ ಸೆಳೆದರು.