ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪಂಜಾಬ್ ಕಿಂಗ್ಸ್ ಟೇಬಲ್ ಟಾಪರ್ ಆಗಿದೆ. ಈ ಮೂಲಕ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶವನ್ನು ಖಚಿತಪಡಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲೇ ಉಳಿಯಲಿದ್ದು, ಎಲಿಮಿನೇಟರ್ ಪಂದ್ಯ ಆಡಲಿದ್ದಾರೆ. ನಾಲ್ಕು ತಂಡಗಳು ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದರೂ ಮೊದಲ ಎರಡು ಸ್ಥಾನ ಯಾರಿಗೆ ಎನ್ನುವುದು ಕೊನೆಯ ಎರಡು ಪಂದ್ಯ ಮುಗಿಯುವವರೆಗೆ ಖಚಿತವಾಗುವುದಿಲ್ಲ. ಲೀಗ್ ಹಂತದಲ್ಲಿ ಇನ್ನು ಒಂದೇ ಒಂದು ಪಂದ್ಯ ಉಳಿದಿದೆ. ಈಗ ಪಂಜಾಬ್ ಕಿಂಗ್ ಮೊದಲ ಸ್ಥಾನದಲ್ಲಿದ್ದು, ಮಂಗಳವಾರ ಎರಡು ಮತ್ತು ಮೂರನೇ ಸ್ಥಾನ ಯಾರಿಗೆ ಎನ್ನುವುದು ತಿಳಿಯಲಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಪಂಜಾಬ್, ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿ 4.2 ಓವರ್‌ಗಳಲ್ಲಿ 34 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೋಶ್ ಇಂಗ್ಲಿಸ್ ಹಾಗೂ ಪ್ರಿಯಾಂಶ್ ಆರ್ಯ ಶತಕದ ಜೊತೆಯಾಟ ನೆರವಿನಿಂದ ಸುಲಭ ಗೆಲುವಿನತ್ತ ಮುನ್ನಡೆಯಿತು. 2ನೇ ವಿಕೆಟಿಗೆ ಈ ಜೋಡಿ 59 ಎಸೆತಗಳಲ್ಲಿ 109 ರನ್ ಗಳಿಸಿತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 2 ಸಿಕ್ಸರ್, 9 ಬೌಂಡರಿ ಸಹಿತ 62 ರನ್ ಸಿಡಿಸಿ ಔಟಾಗುತ್ತಿದ್ದಂತೆ ಜೋಶ್ ಇಂಗ್ಲಿಷ್ ಆರ್ಭಟ ಮುಂದುವರಿಸಿದರು. ಇದಕ್ಕೆ ನಾಯಕ ಶ್ರೇಯಸ್ ಅಯ್ಯರ್ ಕೂಡ ಸಾಥ್ ನೀಡಿದ್ರು.
ಇಂಗ್ಲಿಷ್ 48 ಎಸೆತಗಳಲ್ಲಿ 73 ರನ್ (42 ಎಸೆತ, 3 ಸಿಕ್ಸರ್, 9 ಬೌಂಡರಿ) ಚಚ್ಚಿದ್ರೆ, ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ ಅಜೇಯ 26 ರನ್, ನೇಹಾಲ್ ವಧೇರ ಅಜೇಯ 2 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರು.