ಬೆಂಗಳೂರು:- ಕರ್ನಾಟಕದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಎಷ್ಟೋ ಅಮಾಯಕರು ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ. ಎಷ್ಟೋ ಬಡವರು ಊರನ್ನೇ ತೊರೆದಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಕಳುಹಿಸಿದ್ದ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಸುಗ್ರೀವಾಜ್ಞೆ-2025 ಹೊರಡಿಸಲಾಗಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಕರ್ನಾಟಕ ಹೈಯರ್ ಪರ್ಚೇಸಿಂಗ್ ಅಸೋಸಿಯೇಷನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಕರ್ನಾಟಕ ಹೈಯರ್ ಪರ್ಚೇಸಿಂಗ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು. ಅಲ್ಲದೇ, ಸುಗ್ರೀವಾಜ್ಞೆ ಕುರಿತಂತೆ ನ್ಯಾಯಾಲಯ ಪರಾಮರ್ಶಿಸಿ ಸ್ಪಷ್ಟೀಕರಣ ನೀಡುವ ಅಗತ್ಯವಿದೆ ಎಂದು ಪೀಠ ತಿಳಿಸಿತು. ಇದಕ್ಕೆ ರಾಜ್ಯ ಸರ್ಕಾರ, ಮೈಕ್ರೋ ಫೈನಾನ್ಸ್ ಗಳಿಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತದೆ. ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ವರಮಾನದವರಿಗೆ ಭದ್ರತೆ ರಹಿತ ಸಾಲಕ್ಕೆ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿತ್ತು. ಸರ್ಕಾರದ ಈ ಹೇಳಿಕೆ ಪರಿಗಣಿಸಿ ಹೈಕೋರ್ಟ್ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.