ಗದಗ: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾವೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಸಾಲದ ಬಾಧೆಗೆ ಸಿಲುಕಿ ಅನೇಕರು ಊರು, ಮನೆ ಬಿಟ್ಟು ಹೋಗಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಪಿ. ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ.
ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ತಿಗಣಿಯಂತೆ ಜನ್ರ ರಕ್ತ ಹೀರುತ್ತಿದೆ. ಅದರ ಮಧ್ಯೆ ಫೈನಾನ್ಸ್ ಕಾರ್ಪೊರೇಷನ್, ಮೈಕ್ರೋ ಫೈನಾನ್ಸ್ ಗಳು ಸೇರಿಕೊಂಡು ಅಮಾಯಕ ಹೆಣ್ಣುಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ಆಸೆ ತೋರಿಸಿ, ಅಲ್ಪಸ್ವಲ್ಪ ಹಣ ಕೊಟ್ಟು ಜೀವನ ಪೂರ್ತಿ ಬಡ್ಡಿ ಕಟ್ಟಿ ಸಾಯಬೇಕು ಆ ಪರಿಸ್ಥಿತಿಗೆ ತಂದಿದ್ದಾರೆ. ಕೆಲ ಮಹಿಳೆಯರು ತಾಳಿ ಮಾರಾಟ ಮಾಡಿ ಬಡ್ಡಿ ತುಂಬಿದ್ದಾರೆ. ಸರ್ಕಾರ ಜೀವಂತ ಇದೆಯಾ, ಇಲ್ಲಾ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ ಅಂತ ಕಿಡಿಕಾರಿದ್ದಾರೆ.
ಸಿಎಂ, ಗೃಹ ಮಂತ್ರಿಗಳಿಗೆ ಕೇಳ್ತೇನೆ ನಿಮ್ಮ ಕುರ್ಚಿ ಗುದ್ದಾಟ ಜನಸಾಮಾನ್ಯರಿಗೆ ಬೇಕಿಲ್ಲ, ಆದ್ರೆ ಫೈನಾನ್ಸ್, ಮೈಕ್ರೋ ಕಂಪನಿಗಳು ಯಾವ ರೀತಿ ಜನ್ರ ಜೀವ ಹಿಂಡುತ್ತಿವೆ ಅನ್ನೋದು ಸರ್ಕಾರದ ಗಮನಕ್ಕೆ ಇದೆಯಾ..? ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳುಲು ಸರ್ಕಾರದ ತೆರಿಗೆ ಹಣವನ್ನ ಬಳಸಿ ರಾಜಕೀಯ ಕಾರ್ಯಕ್ರಮ ಮಾಡ್ತಿದ್ದೀರಿ ಅಂತ ಆರೋಪ ಮಾಡಿದ್ದಾರೆ.
ಇನ್ನೂ ಜನಸಾಮಾನ್ಯರಿಗೆ ಯಮನ ರೀತಿಯಲ್ಲಿ ಮೈಕ್ರೋ ಫೈನಾನ್ಸ್, ಚಿಟ್ ಫಂಡ್ ಗಳು ಕಾಡ್ತಾಯಿವೆ. ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಆಗಬಾರದು. ಸರ್ಕಾರ ನೇರವಿಗೆ ಬರಬೇಕು. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜೀವ್ ಒತ್ತಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕರಿದ್ದರು.