ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜೀವ ಕಳೆದುಕೊಂಡವರ ಸಂಖ್ಯೆ ಏರುತ್ತಲೇ ಇದೆ. ಸಾಲ ಕೊಟ್ಟವರ ಕಾಟಕ್ಕೆ ಜನರು ನೆಮ್ಮದಿಯಿಂದ ಜೀವನ ಮಾಡದಂತಾಗಿದೆ.
ಮಿತಿಮೀರಿದ ಬಡ್ಡಿಗೆ ಕೂಲಿ ನಾಲಿ ಮಾಡಿ ಸಾಲ ಕಟ್ಟಲು ಆಗದೆ ಜನ ಗೋಳಾಡುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರ ಮೂಗುದಾರ ಹಾಕಬೇಕಿದೆ. ಇದೇ ವಿಚಾರಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಭೆ ನಡೆಸಿದ್ದಾರೆ.
ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ? ಏನು ಕ್ರಮ ಕೈಗೊಂಡಿದ್ದೀರಿ ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಒಬ್ಬರೇ ಸಾಲಗಾರರು ಬೇರೆ ಬೇರೆ ಗುರಿತಿನ ಚೀಟಿ ( ಐ ಡಿ ಕಾರ್ಡ್ ಗಳು) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ ಎಂದು ಸಿಎಂ ಕಂಪನಿಗಳಿಗೆ ಪ್ರಶ್ನಿಸಿದರು.