ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ತಯಾರಿ ನಡೆಸಿದೆ.
ಇದರ ಬೆನ್ನಲ್ಲೇ ಸರ್ಕಾರದ ಕಡಿವಾಣಕ್ಕೂ ಕ್ಯಾರೇ ಎನ್ನದೇ ಬಡ್ಡಿ ದಂಧೆಕೋರರ ಟಾರ್ಚರ್ ಗದಗ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದೆ. ಇದೀಗ ಕೇವಲ 10 ಸಾವಿರ ರೂಪಾಯಿಗೆ ಮನೆಗೆ ಬೀಗ ಹಾಕಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ (65) ಎಂಬುವರ ಮನೆಗೆ ಬೀಗ ಹಾಕಲಾಗಿದ್ದು,
ವೃದ್ದೆ ಸಹೋದರನ ಚಿಕಿತ್ಸೆಗಾಗಿ ಮೌಲಾಸಾಬ್ ಬೆಟಗೇರಿ ಎಂಬುವರ ಬಳಿ 10 ಸಾವಿರ ರೂ ಪಡೆದಿದ್ದರು. ಕಾಲಾವಕಾಶ ಕೊಡಿ ಅಂದ್ರು ಕೇಳದ ಬಡ್ಡಿಮೌಲಾಸಾಬ್, ವೃದ್ದೆಯನ್ನು ಹೊರಹಾಕಿ ಮನೆಗೆ ಬೀಗ ಹಾಕಿದ್ದಾರೆ. ಇದರಿಂದ ವೃದ್ಧೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.