ಮಂಡ್ಯ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲ, ಬಡ್ಡಿಯ ಹಾವಳಿ ತಾಳಲಾರದಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದವರು ಬಡ್ಡಿಯ ಕಿರುಕುಳ ತಾಳಲಾರದೇ ಊರೇ ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆ, ಜಿಲ್ಲೆಗಳಲ್ಲೂ ಮೈಕ್ರೋ ಫೈನಾನ್ಸ್ ಸಾಲದ ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದೀಗ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಬ್ಯಾಂಕ್ವೊಂದರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಪ್ರೇಮಾ(59)ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, 2018 ರಲ್ಲಿ ಮಗಳ ಮದುವೆ ಮಾಡುವ ಸಲುವಾಗಿ ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ ಮನೆಯ ಮೇಲೆ ಆರು ಲಕ್ಷ ರೂ. ಸಾಲ ಪಡೆದಿದ್ದರು.
2024 ರ ನವೆಂಬರ್ವರೆಗೂ ಪ್ರತಿತಿಂಗಳು 10 ಸಾವಿರದಂತೆ ಹಣವನ್ನ ಕಟ್ಟಿಕೊಂಡು ಬಂದಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ ಪತಿ ಹಾಗೂ ಮಗನ ಅನಾರೋಗ್ಯದ ಹಿನ್ನೆಲೆಯಲ್ಲಿ ಕಂತು ಕಟ್ಟಿಲ್ಲ. ಹೀಗಾಗಿ ವಾರದ ಹಿಂದೆ ಬ್ಯಾಂಕ್ ಸಿಬ್ಬಂದಿ ಮನೆಯನ್ನ ಸೀಜ್ ಮಾಡಿದ್ದಾರೆ.
ಅಲ್ಲದೇ ನೋಟಿಸ್ ನೀಡಿ ಮತ್ತೆ ಆರು ಲಕ್ಷ ರೂ. ಕಟ್ಟುವಂತೆ ಹೇಳಿದ್ದಾರೆ. ಕಳೆದ ವಾರದಿಂದ ಸಂಬಂಧಿಕರ ಮನೆಯಲ್ಲಿ ಇದ್ದ ಪ್ರೇಮಾ ಕುಟುಂಬ, ಗ್ರಾಮದಲ್ಲಿ ಈ ರೀತಿ ಮರ್ಯಾದೆ ಹೋಯ್ತು ಅಂತಾ ಮನೆಯ ಮುಂದೇಯೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಪ್ರೇಮಾ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.