ಮಾಸ್ಕೋ: ಮಧ್ಯಪ್ರಾಚ್ಯದಲ್ಲಿನ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಘರ್ಷವು ಕೋವಿಡ್ ಮಹಾಮಾರಿಯಂತೆಯೇ ವಿಶ್ವದ ಆರ್ಥಿಕತೆ ಮತ್ತು ಪೂರೈಕೆ ವ್ಯವಸ್ಥೆಗಳ ಮೇಲೆ ದೊಡ್ಡ ಹೊಡೆತ ನೀಡಬಹುದು. ಈಗಾಗಲೇ ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದು, ಹೈಡ್ರೋಕಾರ್ಬನ್, ಲೋಹಗಳು ಮತ್ತು ರಸಗೊಬ್ಬರ ಕ್ಷೇತ್ರಗಳು ಭಾರೀ ಒತ್ತಡಕ್ಕೆ ಒಳಗಾಗಿವೆ ಎಂದಿದ್ದಾರೆ.
ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಈ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ಯಾವಾಗ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಇದೀಗ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗದೆ, ಅನೇಕ ರಾಷ್ಟ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಫೆಬ್ರವರಿ 28ರಿಂದ ಆರಂಭವಾದ ಈ ಯುದ್ಧದಲ್ಲಿ ರಷ್ಯಾ ಇರಾನ್ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಗಮನಾರ್ಹವಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿ ಬಳಿ ನಡೆದ ದಾಳಿಯಲ್ಲಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.
ಈ ಬೆಳವಣಿಗೆಗಳ ನಡುವೆ, ಇರಾನ್ ತನ್ನ ಉನ್ನತ ಸೇನಾ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಗಲ್ಫ್ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳ ಭದ್ರತೆಗೆ ಮತ್ತಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ.



