ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಎದುರಾಗಿದ್ದು, ಇದರ ನಡುವೆ ಬೆಂಗಳೂರಿನಲ್ಲಿ ಅಕ್ರಮ ಸಿಲಿಂಡರ್ ದಾಸ್ತಾನು ಹಾಗೂ ಬ್ಲಾಕ್ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ.
ನಗರದ ಪೀಣ್ಯ, ಆರ್‌ಎಂಸಿ ಯಾರ್ಡ್, ಕೆಂಗೇರಿ ಹಾಗೂ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡಿದ್ದಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸಾಗಾಟಗಾರರು ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಲ್ಪಿಜಿ ಕೊರತೆಯಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಇನ್ನೂ ಕೆಲವೆಡೆ ತಿಂಡಿ ಹಾಗೂ ಊಟದ ಮೆನುಗಳಲ್ಲಿ ಕಡಿತ ಮಾಡಲಾಗಿದೆ.
ಗೃಹಬಳಕೆಯ ಸಿಲಿಂಡರ್ ಪಡೆಯಲು ಸಹ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನೇಕ ಎಜೆನ್ಸಿಗಳ ಮುಂದೆ ಸಾರ್ವಜನಿಕರು ದೀರ್ಘ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕೆಲವರು ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಪೊಲೀಸರು ಎಚ್ಚರಿಕೆ ವಹಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.



