ರಾಯಚೂರು:- ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿಗಳು ಘರ್ಜಿಸಿದ್ದು, ಅಕ್ರಮವಾಗಿ ಸಿ.ಎ.ಸೈಟ್ ನಲ್ಲಿ ನಿರ್ಮಿಸಿದ ಶಿವ ಮತ್ತು ಗಣೇಶನ ದೇಗುಲ ತೆರವು ಮಾಡಲಾಗಿದೆ.
ಸಂತೋಷ್ ನಗರದಲ್ಲಿನ ಶಿಕ್ಷಣ ಇಲಾಖೆಯ ಸ್ಥಳದಲ್ಲಿ ಅನಧಿಕೃತವಾಗಿ ಶಿವನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಡಳಿತ ನೆಲಸಮ ಮಾಡಿದೆ.
ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ನಗರದ ಸಂತೋಷ್ ನಗರದಲ್ಲಿ ಮಧ್ಯರಾತ್ರಿ ನಗರಸಭೆ ಪೌರಾಯುಕ್ತ, ಹೆಚ್ಚುವರಿ ಎಸ್ ಪಿ ಶಿವಕುಮಾರ್, ಹರೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾಡಳಿತ ಶಿವನ ದೇವಸ್ಥಾನವನ್ನು ನೆಲಸಮ ಮಾಡಿದೆ.
ಮಧ್ಯೆರಾತ್ರಿ ಜೆಸಿಬಿಗಳು ಶಿವನ ದೇವಾಲಯವನ್ನು ಕೆಡವಿವೆ. ಶಿಕ್ಷಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ದೇವಾಲಯ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ.
ಜಿಲ್ಲಾಧಿಕಾರಿ ನಿತೀಶ್ ದೇವಸ್ಥಾನ ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ದೇವಾಲಯವನ್ನು ತೆರವು ಮಾಡಲಾಗಿದೆ. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಆದರೆ ಸ್ಥಳೀಯರ ಮಾತುಗಳನ್ನು ಲೆಕ್ಕಿಸಿದ ಪೊಲೀಸರು ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ:-
ರಾಯಚೂರಿನ ಸಂತೋಷ ನಗರದಲ್ಲಿನ ದೇಗುಲದ CA ಸೈಟ್ 2022 ರಲ್ಲಿ ಫ್ರೌಢಶಾಲೆ ಕಟ್ಟಡಕ್ಕೆ ಮಂಜೂರಾಗಿತ್ತು. ಜಾಗ ಮಂಜೂರಾದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು.
ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆದ್ರೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಖಾಕಿ ಬಂದೋಬಸ್ತ್ ನಲ್ಲಿ ತೆರವು ಮಾಡಲಾಗಿದೆ.