HomeAgricultureಕ್ಯಾನ್ಸರ್‌ಗೂ ಮದ್ದಿದೆ ಮನಗಾಣಿ

ಕ್ಯಾನ್ಸರ್‌ಗೂ ಮದ್ದಿದೆ ಮನಗಾಣಿ

For Dai;y Updates Join Our whatsapp Group

Spread the love

ಇಂದಿನ ಆಧುನಿಕ ಯುಗದಲ್ಲಿ, ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಯಾವ ವ್ಯಕ್ತಿಗೆ ಯಾವ ಕಾಯಿಲೆ ಇದೆ ಅಥವಾ ಯಾವ ವ್ಯಕ್ತಿ ಯಾವ ಕಾಯಿಲೆಗೆ ತುತ್ತಾಗುತ್ತಾನೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲದಲ್ಲಿ ರೋಗಗಳು ಒಂದರ ನಂತರ ಒಂದರಂತೆ ಬಂದೆರಗಿ ಜನರನ್ನು ಹೆದರಿಸುತ್ತಿವೆ. ಈ ಹಿಂದೆ 2020ರಲ್ಲಿ ಮತ್ತು ಈಗಲೂ ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದು ನಮ್ಮ ಕಣ್ಣ ಮುಂದಿದೆ. ಇಂತಹ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ (ಅರ್ಬುದ) ಕೂಡ ಒಂದು. ವಿಶ್ವದ ಎಲ್ಲಾ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ನವೆಂಬರ್ 7ರಂದು ಭಾರತದಾದ್ಯಂತ `ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ’ವನ್ನು ಆಚರಿಸಲಾಗುತ್ತದೆ.

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು 1975ರಲ್ಲಿ ಪ್ರಾರಂಭಿಸಲಾಯಿತು. ಹೀಗೆ ಮುಂದುವರೆದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಭಾರತೀಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಸೆಪ್ಟೆಂಬರ್ 2014ರಲ್ಲಿ ಘೋಷಿಸಿದರು.

ಕ್ಯಾನ್ಸರ್‌ನ್ನು ಕನ್ನಡದಲ್ಲಿ ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೇ ಅಗ್ರಸ್ಥಾನವನ್ನು ಪಡೆದಿದೆ. ಮೊದಲ ಸ್ಥಾನವನ್ನು ಹೃದಯಾಘಾತ ಅಲಂಕರಿಸಿದೆ. ವರ್ಷದಲ್ಲಿ ಸರಿಸುಮಾರು 15 ಮಿಲಿಯನ್ ಮಂದಿ ಕ್ಯಾನ್ಸರ್‌ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಅನಕ್ಷರತೆ, ಬಡತನ, ಮೂಢನಂಬಿಕೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗಲೇ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ. ಈ ನಿಟ್ಟಿನಲ್ಲಿ ನವೆಂಬರ್ 7 ಅನ್ನು ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.

ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಶೇ. 90ರಷ್ಟು ಅರ್ಬುದ ರೋಗವನ್ನು ಸರ್ಜರಿ ಮುಖಾಂತರ ತೆಗೆಯಲಾಗುತ್ತದೆ. ಆದರೆ ಕೆಲವೊಂದು ಅರ್ಬುದ ರೋಗವನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ. ಆದರೆ ಮುಂದುವರಿದ ಹಂತದಲ್ಲಿ (3 ಮತ್ತು 4ನೇ ಹಂತದಲ್ಲಿ) ಸರ್ಜರಿಯ ಜೊತೆಗೆ ಕಿಮೋಥೆರಫಿ ಮತ್ತು ರೆಡಿಯೋಥೆರಫಿಯ (ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು.

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ನವೆಂಬರ್ 7ರಂದು ಕಾದಂಬರಿಗಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ, ವಿಜ್ಞಾನಿ ಮೇಡಮ್ ಕ್ಯೂರಿ ಅವರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಆಚರಿಸಲಾಗುತ್ತದೆ. 1867ರಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ ಜನಿಸಿದ ಮೇರಿ ಕ್ಯೂರಿ ಅವರು ರೇಡಿಯಂ ಮತ್ತು ಪೊಲೊನಿಯಂನ ಆವಿಷ್ಕಾರದಿಂದಾಗಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರ ವೈಜ್ಞಾನಿಕ ಸಂಶೋಧನಾ ಕಾರ್ಯವು ಕ್ಯಾನ್ಸರ್ ಚಿಕಿತ್ಸೆಗಾಗಿ ಪರಮಾಣು ಶಕ್ತಿ ಮತ್ತು ರೆಡಿಯೋಥೆರಪಿಯ ಅಭಿವೃದ್ಧಿಗೆ ಕಾರಣವಾಯಿತು.

ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಆರಂಭಿಸಿದರೆ, ಆಗ ಅದು ದೇಹವಿಡೀ ವ್ಯಾಪಿಸಿ ಹಾನಿ ಉಂಟು ಮಾಡುತ್ತದೆ. ಇದು ಹೊಸ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ನಾವು ಎಲ್ಲದಕ್ಕೂ ಪರಿಹಾರವನ್ನು ಕಂಡುಕೊಂಡಿದ್ದೇವೆ. ಆದರೆ ಕ್ಯಾನ್ಸರ್ ರೋಗಿಗಳ ಮಾರಣಾಂತಿಕ ಸಮಸ್ಯೆ ಹಾಗೇ ಉಳಿದಿದೆ. ಮೊದಲು ಕ್ಯಾನ್ಸರ್ ರೋಗದ ತೀವ್ರತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ. ನಂತರ ಅದರ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅದರಲ್ಲಿ ನಮ್ಮ ಕೊಡುಗೆಯನ್ನು ನೀಡುವ ಮತ್ತು ಉತ್ತಮವಾದ ಜಾಗತಿಕ ಆರೋಗ್ಯ ಪರಿಸರಕ್ಕೆ ದಾರಿ ಮಾಡಿಕೊಡಲು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾವೆಲ್ಲರೂ ಶಪಥಗೈಯೋಣ.

ಒಟ್ಟಾರೆಯಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ. ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯಲೋಕಕ್ಕೆ ನಮ್ಮ ಬೆಂಬಲ ನೀಡೋಣ. ಕ್ಯಾನ್ಸರ್‌ನಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರ ಬದುಕಿಗೆ ದಾರಿದೀಪವಾಗೋಣ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗೋಣ.

ಬಸವರಾಜ ಎಮ್.ಯರಗುಪ್ಪಿ.
ಶಿಕ್ಷಕರು, ಲಕ್ಷೇಮೇಶ್ವರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!