ವಿಜಯಸಾಕ್ಷಿ ಸುದ್ದಿ, ಗದಗ: ವನ್ಯಜೀವಿಧಾಮ ಕಾಯ್ದೆ ಅನ್ವಯ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ. ಆದಾಗ್ಯೂ ಕೆಲ ಗಣಿ ಕಂಪನಿಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಪದೇ ಪದೇ ಪ್ರಸ್ತಾವನೆ ಸಲ್ಲಿಸುತ್ತಿವೆ. ಕಪ್ಪತಗುಡ್ಡದ ವನ್ಯಜೀವಿಧಾಮದ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಗಣಿ ಕಂಪನಿಗಳಿಗೆ ಗುತ್ತಿಗೆ ನೀಡುವ ದುರುದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡಿ, 10 ಕಿ.ಮೀ.ನಿಂದ 1 ಕಿ.ಮೀಗೆ ಇಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ, ಯಾವುದೇ ಕಾರಣಕ್ಕೂ 10 ಕಿ.ಮೀ. ಒಳಗೆ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡ 65 ಕಿ.ಮೀ. ವ್ಯಾಪಿಸಿದೆ. ಅಪರೂಪದ ಔಷಧೀಯ ಸಸ್ಯಗಳ ಆಗರವಾಗಿದೆ. ಅನೇಕ ಬಗೆಯ ಪ್ರಾಣಿ-ಪಕ್ಷಿಗಳ ವಾಸಸ್ಥಾನವಾಗಿದೆ. ಇಂಥಹ ಅತ್ಯಮೂಲ್ಯ ವನ್ಯ ಸಂಪತ್ತನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ರಮೇಶ ರಾಠೋಡ, ನವೀನ ಭಂಡಾರಿ, ದಾದು ಮುಂಡರಗಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಸಾದಿಕಗುಳಗುಂದಿ, ನಿಜಾಮ ಹುಬ್ಬಳ್ಳಿ, ವಿಕಾಸ ಕ್ಷೀರಸಾಗರ, ಅಶ್ರಫ್ ಇಬ್ರಾಹಿಂ, ರಶೀದ್ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.