ನವದೆಹಲಿ: ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಪ್ರಸಾರ ಖಾತೆ ಸಚಿವರಾದ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದರು.
ಈಗಾಗಲೇ ರಾಜ್ಯಕ್ಕೆ ಹೈ ಸ್ಪೀಡ್ ರೈಲು ಕಾರಿಡಾರ್ ಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ಬೆಂಗಳೂರು-ಪುಣೆ ಹೈ-ಸ್ಪೀಡ್ ರೈಲು ಕಾರಿಡಾರ್ ನೀಡಲಾಗಿದೆ. ಈ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದೆ ಎಂಬುದಾಗಿ ರೇಲ್ವೆ ಸಚಿವರು ತಮಗೆ ತಿಳಿಸಿದರು ಎಂದು ಸಚಿವರು ಕುಮಾರಸ್ವಾಮಿ ಅವರು ಹೇಳಿದರು.
ಅಲ್ಲದೆ, ಬೆಂಗಳೂರು-ಮುಂಬಯಿಗೆ ಹೊಸ ರೈಲು ಆರಂಭಿಸಲಾಗುವುದು ಎನ್ನುವ ಮಾಹಿತಿಯನ್ನು ರೈಲ್ವೆ ಸಚಿವರು ತಮಗೆ ನೀಡಿದರು. ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲು ಕಾರಿಡಾರ್ ಹಾಗೂ ಬೆಂಗಳೂರು-ಮುಂಬಯಿ ನಡುವಿನ ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲ ಆಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್‌ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು ಎಂದು ಸಚಿವರು ಹೇಳಿದರು.



