ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ ಪಾಲ್ಗೊಳ್ಳುವಂತೆ ಲಕ್ಕುಂಡಿ ಗ್ರಾಮಸ್ಥರಿಗೆ ಸಚಿವ ಡಾ. ಎಚ್.ಕೆ. ಪಾಟೀಲ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಿಮ್ಮೆಲ್ಲರ ಹೆಮ್ಮೆಯ ಲಕ್ಕುಂಡಿ ಗ್ರಾಮದ ಮೊದಲ ಹೆಸರು ‘ಲೊಕ್ಕಿ ಗುಂಡಿ’, ಎಂದರೆ ಸಾಕ್ಷಾತ್ ಲಕ್ಷ್ಮಿ ನೆಲೆ ಎಂದರ್ಥ. ಈ ಗ್ರಾಮವು ‘ದೇವಾಲಯಗಳ ಸ್ವರ್ಗ’ವೆಂದು ಹೆಸರಾಗಿದೆ. ಲಕ್ಕುಂಡಿ ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ ರನ್ನ ಕವಿಗೆ ಆಶ್ರಯ ನೀಡಿದ್ದ ಕವಿವರ ಕಾಮಧೇನು, ದಾನಚಿಂತಾಮಣಿ ಎಂದು ಪ್ರಸಿದ್ಧಳಾದ ಅತ್ತಿಮಬ್ಬೆಗೆ ಉಸಿರಿತ್ತು ಹೆಸರಾದ ಪಾವನ ಭೂಮಿ. ಶರಣ ಸಹೋದರ-ಸಹೋದರಿಯರಾದ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿಯಾಗಿದೆ. ಇಂತಹ ಲಕ್ಕುಂಡಿಯ ಗತವೈಭವವನ್ನು ಪುನಃ ಸ್ಥಾಪಿಸಲು ಸಾರ್ವಜನಿಕರು ಕೈಜೋಡಿಸಿ ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವೆಚ್.ಕೆ. ಪಾಟೀಲ ಮನವಿ ಮಾಡಿದ್ದಾರೆ.

Advertisement

ಕಲ್ಯಾಣ ಚಾಳುಕ್ಯರು, ಹೊಯ್ಸಳರು, ಕಲಚುರ್ಯ ಅರಸರು ಸಾವಿರ ವರ್ಷಗಳ ಹಿಂದೆ ಹಾಕಿಸಿರುವ ಶಾಸನಗಳ ಪ್ರಕಾರ ಲಕ್ಕುಂಡಿ ಸಾಕ್ಷಾತ್ ಶ್ರೀರಾಮನಿಂದ ನಿರ್ಮಿತವಾದ ಮಹಾ ಅಗ್ರಹಾರ, ಪಾವನ ಚರಿತ್ರಳಾದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ. ಒಳ್ಳೆಯತನಕ್ಕೆ, ಧರ್ಮಕ್ಕೆ, ಲಕ್ಷ್ಮಿ ನಮಗೆ ತವರು ಮನೆಯಂತಿದ್ದ ಲಕ್ಕುಂಡಿ ಗ್ರಾಮವು ಇಂದ್ರನ ಅಮರಾವತಿಗಿಂತಲೂ ಶ್ರೇಷ್ಠವಾಗಿದ್ದು, ಅಮರಾವತಿಯನ್ನು ಮತ್ತು ಲಕ್ಕುಂಡಿಯನ್ನು ತಕ್ಕಡಿಯಲ್ಲಿಟ್ಟು ತೂಗಿದಾಗ ಲಕ್ಕುಂಡಿಯ ತೂಕವೇ ಹೆಚ್ಚಾಗಿತ್ತೆಂದು ಶಾಸನದಲ್ಲಿ ಹೇಳಲಾಗಿದೆ.

ಹೊಯ್ಸಳರ ರಾಜಧಾನಿಯಾಗಿದ್ದ ಲಕ್ಕುಂಡಿಯಲ್ಲಿ, 101 ದೇವಾಲಯಗಳು, 101ಬಾವಿಗಳು ಇದ್ದವೆಂಬುದು ಪ್ರತೀತಿ. ಇವು ವೈವಿಧ್ಯಮಯವಾದ ವಾಸ್ತು ಶೈಲಿಯನ್ನು ಹೊಂದಿದ್ದು, ಆ ಕಾಲದಲ್ಲಿ ಕರ್ನಾಟಕದ ಶಿಲ್ಪಕಲಾ ಚಟುವಟಿಕೆಗಳ ಕಾರ್ಯಾಗಾರವಾಗಿತ್ತು. ಪ್ರಮುಖ ವ್ಯಾಪಾರಿ ಕೇಂದ್ರವೂ ಆಗಿದ್ದ ಲಕ್ಕುಂಡಿಯಲ್ಲಿ ಟಂಕಸಾಲೆ ಇದ್ದು, ಇಲ್ಲಿ ಮುದ್ರಿಸುತ್ತಿದ್ದ ನಾಣ್ಯಗಳು ರಾಜಮಾನ್ಯತೆಯನ್ನು ಪಡೆದಿತ್ತು. ನಮ್ಮ ಪೂರ್ವಜರು ದೇವಾಲಯಗಳನ್ನು ನಿರ್ಮಿಸಿ ಶಾಸನಗಳನ್ನು ಹಾಕಿಸುವಾಗ, ಸೂರ್ಯ ಚಂದ್ರ, ಆಕಾಶ, ಸಾಗರ, ಪರ್ವತಗಳಿರುವವರೆಗೂ ಅವುಗಳನ್ನು ರಕ್ಷಿಸಬೇಕೆಂದು ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಲಕ್ಕುಂಡಿ ಇಂದು ತನ್ನ ಗತವೈಭವವನ್ನು ಸಾರುತ್ತಿದೆ. ಆದರೆ, ಇಂದು ಕಾಲನ ಹೊಡೆತಕ್ಕೆ, ನಮ್ಮ ಆಲಕ್ಷ್ಯಕ್ಕೆ ಸಿಕ್ಕಿ ಕಣ್ಮರೆಯಾಗುತ್ತಿವೆ. ದೇವಾಲಯದ ಅವಶೇಷಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿವೆ. ಇದು ನನಗೆ ಮಾತ್ರವಲ್ಲ, ನಮ್ಮೆಲ್ಲರಿಗೆ ತುಂಬಾ ನೋವನ್ನು ತಂದಿದೆ. ಹೀಗಾಗಿ ನಮ್ಮ ಪ್ರಾಚೀನ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಿಸುವ ದಿಸೆಯಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ.

ಅದರ ಫಲಿತವಾಗಿ, ಲಕ್ಕುಂಡಿ ಗ್ರಾಮವನ್ನು ಪುನರುತ್ಥಾನ ಮಾಡಲು ಗತವೈಭವ ಮರಳಿಸಲು ಮುಂದಡಿ ಇಟ್ಟಿದೆ. ನಿಮ್ಮ ಮನೆಗಳ ಬಳಿ ಚದುರಿ ಬಿದ್ದಿರುವ ಕಂಬಗಳು, ಭಗ್ನಗೊಂಡಿರುವ ಶಿಲ್ಪಗಳು, ಮನೆಯ ಮೆಟ್ಟಿಲಾಗಿರುವ ಶಾಸನಗಳು, ನಿರ್ಲಕ್ಷ್ಯಯಕ್ಕೊಳಗಾಗಿರುವ ತಾಳೆಗರಿಯ ಹಸ್ತಪ್ರತಿಗಳು ಇನ್ನೂ ಮುಂತಾದ ಐತಿಹಾಸಿಕ ಮಹತ್ವದ ಪ್ರಾಚ್ಯಾವಶೇಷಗಳನ್ನು ನೀಡುವಂತೆ ಕೋರಿ ನ.24ರಂದು ನಿಮ್ಮ ಮನೆಯ ಬಾಗಿಲಿಗೆ ಬಂದು ಸ್ವೀಕರಿಸುತ್ತೇವೆ. ನೀವು ಕೊಡುವ ಪ್ರಾಚ್ಯಾವಶೇಷಗಳನ್ನು ಅತ್ಯಂತ ವಿಶೇಷವಾದವುಗಳೆಂದು ಭಾವಿಸಿ, ಅವುಗಳನ್ನು ಸೂಕ್ತ ಸಂರಕ್ಷಣೆ ಮಾಡುತ್ತೇವೆ.

ವಿಶ್ವ ಭೂಪಟದಲ್ಲಿ ಹಂಪಿಯಂತೆಯೇ ಲಕ್ಕುಂಡಿಗೂ ಜಾಗತಿಕ ಮನ್ನಣೆ ತರುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ತುಂಬಾ ಅಗತ್ಯವಿದೆ. ಅಲಕ್ಷ್ಯಕ್ಕೊಳಗಾದ ಇತರ ಉದ್ದೇಶಗಳಿಗೆ ಬಳಸಲ್ಪಟ್ಟ ಪ್ರಾಚ್ಯಾವಶೇಷಗಳನ್ನು ಒಂದೆಡೆ ಕ್ರೋಢೀಕರಿಸಿ, ದೇವಾಲಯಗಳ ಅತಿಕ್ರಮಣವನ್ನು ತೆರವುಗೊಳಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೋರುವ ಕಾಳಜಿಯೂ ಮಹತ್ತರವಾದ ಕಾಯಕವಾಗುತ್ತದೆ. ಆ ಮೂಲಕ ನಾವೆಲ್ಲರೂ ಸೇರಿ ಮತ್ತೆ ಲಕ್ಕುಂಡಿಯ ಚರಿತ್ರೆಯನ್ನು ಪುನರ್ನಿರ್ಮಾಣ ಮಾಡಿ, ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ.

ನಮ್ಮ ಈ ಮಹತ್ತರ ಕಾರ್ಯದಲ್ಲಿ ನೀವೂ ಭಾಗಿಗಳಾಗಿ. ಲಕ್ಕುಂಡಿಯ ವೈಭವವನ್ನು ಪುನರ್‌ಸ್ಥಾಪಿಸುವ ನಮ್ಮ ನವೀನ ಪ್ರಯತ್ನದ ಭಾಗವಾಗಿ ಮನೆ-ಮನೆಯಿಂದ, ಹೊಳಗಟ್ಟಿಗಳಿಂದ ನಿಮ್ಮ ಪರಿಸರದ ಕಟ್ಟಿಗಟ್ಟಿಯಲ್ಲಿನ ಸ್ಮಾರಕಗಳ, ಸುಂದರ ಶಿಲ್ಪಕಲಾ ಕಲಾಕೃತಿಗಳ, ಪ್ರಾಚ್ಯಾವಶೇಷಗಳ ಅನ್ವೇಷಣೆಗೆ ನೀವೂ ಕೈಜೋಡಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here