ಬೆಂಗಳೂರು: ಸಚಿವ ಜಮೀರ್ ಅಹ್ಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ. ಈ ರೀತಿಯಾದರೂ ಭೂಮಿ ಕಸಿದು, ಸಿಎಂ ಆಗುವ ಯೋಜನೆ ರೂಪಿಸಲಾಗಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡುತ್ತಾರೆ.
ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತದೆ. ಈಗ ಜಮೀರ್ ಅಹಮದ್ ಕೂಡ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್‌ಗೆ ಸೇರಿಸಲು ತಂತ್ರ ಮಾಡಿದ್ದಾರೆ.
ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ. ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿ, ರೈತರ ಮನೆ ದೀಪ ಕಸಿದುಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದು ಅಶೋಕ್ ಅವರು ಎಚ್ಚರಿಕೆ ನೀಡಿದ್ದಾರೆ.