ಬೆಂಗಳೂರು/ಚಾಮರಾಜನಗರ: ಕಳೆದ ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಬಳಿಕ ಷರತ್ತುಬದ್ಧವಾಗಿ ಪುನರಾರಂಭ ಮಾಡಿರುವ ಕ್ರಮವನ್ನು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಸಫಾರಿ ಸ್ಥಗಿತಗೊಳಿಸಿದ್ದರಿಂದ 4 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಸಫಾರಿ ವರ್ಷಗಳಿಂದ ನಡೆಯುತ್ತಿದೆ. ಯಾವುದೇ ಸಮೀಕ್ಷೆ ನಡೆಸದೇ ಏಕಾಏಕಿ ಸಫಾರಿಯನ್ನು ನಿಲ್ಲಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಖಂಡ್ರೆ, ಸಫಾರಿಯನ್ನು ಏಕಾಏಕಿ ನಿಲ್ಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ನವೆಂಬರ್‌ನಲ್ಲಿ 15 ದಿನಗಳ ಅವಧಿಯಲ್ಲಿ ಮೂರು ಅಮೂಲ್ಯ ಜೀವಹಾನಿ ಸಂಭವಿಸಿತ್ತು. ಜೊತೆಗೆ ಒಬ್ಬರು ಶಾಶ್ವತ ಅಂಗವಿಕಲರಾಗಿದ್ದರು. ಈ ನಡುವೆ ಹುಲಿಗಳು ಕಾಡಿನಿಂದ ಹೊರಬಂದು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಗಾಗಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಎಂದು ಹೇಳಿದರು.
ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಗಳು ಕೂಡ ಸಫಾರಿ ರಾತ್ರಿ ವೇಳೆಯವರೆಗೆ ನಡೆಯುತ್ತಿರುವುದು, ಹೆಚ್ಚಿನ ವಾಹನ ಸಂಚಾರ ಹಾಗೂ ಪ್ರವಾಸಿಗರ ಒತ್ತಡದಿಂದ ವನ್ಯಜೀವಿಗಳು ಅಶಾಂತಗೊಂಡು ಕಾಡಿನಿಂದ ಹೊರಬರುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿ ಸಫಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದವು ಎಂದು ಸಚಿವರು ತಿಳಿಸಿದರು.
ಈ ಮಧ್ಯೆ ಮತ್ತೊಂದು ಹುಲಿ ದಾಳಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಿಬ್ಬಂದಿ ಹಾಗೂ ವಾಹನಗಳನ್ನು ಕಾಡಿನಂಚಿನ ಗ್ರಾಮಗಳಲ್ಲಿ ನಿಗಾ ವಹಿಸಲು ಬಳಸಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.



