ಧಾರವಾಡ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬರಗಾಲ ಸಂಬಂಧ ಗ್ರಾಮ ಪಂಚಾಯತಿ ಅಧ್ಯಕ್ಷರ ಹಾಗೂ ಪಿಡಿಓಗಳ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಬರಗಾಲ ಬಿಟ್ಟು ಬೇರೆ ಬೇರೆ ವಿಷಯಗಳ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ನವಲಗುಂದ ತಾಲೂಕಿನ ಗ್ರಾಮ ಪಂಚಾಯ ಅಧ್ಯಕ್ಷರೊಬ್ಬರು, ನೀವು ಬರಗಾಲದ ಸಂಬಂಧ ಚರ್ಚೆ ಮಾಡಿ. ತೀವ್ರ ಬರಗಾಲವಿದೆ ಅದರ ಬಗ್ಗೆ ಚರ್ಚೆ ಮಾಡಿ. ಅದನ್ನು ಬಿಟ್ಟು ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದರೆ ಹೇಗೆ? ಸುಮ್ಮನೆ ನೀವು ಮುಖ ತೋರಿಸಲು, ಬರಬೇಡಿ ಎಂದು ಸಚಿವರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಾರ್ವಜನಿಕವಾಗಿಯೇ ಹೇಳಿದ.
ಇದರಿಂದಾಗಿ ಕೆಂಡಾಮಂಡಲರಾದ ಸಚಿವ ಲಾಡ್, ನಾವು ಬರಗಾಲದ ಸಲುವಾಗಿಯೇ ಈ ಸಭೆ ಕರೆದಿದ್ದೇವೆ. ಬರಗಾಲದ ವಿಷಯವಾಗಿಯೇ ಚರ್ಚೆ ಮಾಡುತ್ತಿದ್ದೇವೆ. ಏನೇನೋ ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಸಾರ್ವಜನಿಕವಾಗಿಯೇ ಸಚಿವರ ಕ್ಷಮೆ ಕೋರಿದ ಪ್ರಸಂಗವೂ ನಡೆಯಿತು.