ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜನವರಿ 25ರಿಂದ ಜನವರಿ 28ರವರೆಗೆ ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜನವರಿ 25ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ಸುವರ್ಣ ಶಿಕ್ಷಣ-ಮೇಘಾ ಎಜ್ಯುಕೇಶನ್ ಎಕ್ಸ್ಪೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ 11.30ಕ್ಕೆ ಹುಬ್ಬಳ್ಳಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ-ಧಾರವಾಡ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್‌ದಿಂದ ಆಯೋಜಿಸಿರುವ ಫೋಟೊ ಎಕ್ಸ್ಪೋ ಮೇಳವನ್ನು ಉದ್ಘಾಟಿಸುವರು.
ಮಧ್ಯಾಹ್ನ 1 ಗಂಟೆಗೆ ಜಿ.ಬಸನಕೊಪ್ಪ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ ಕಾಮಗಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ನೀರಸಾಗರ-ಡೊಂಬರಿಕೊಪ್ಪ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಜಿ.ಬಸನಕೊಪ್ಪ ನೀರಸಾಗರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಂತರ ಮಧ್ಯಾಹ್ನ 3 ಗಂಟೆಗೆ ಅಳ್ನಾವರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಸಂಜೆ 6.30 ಗಂಟೆಗೆ ಧಾರವಾಡ ನಗರದ ದೊಡ್ಡನಾಯಕನಕೊಪ್ಪದಲ್ಲಿ ಆಯೋಜಿಸಿರುವ ಬಾಲಗಂಗಾಧರ ಮಹಾ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜನವರಿ 26ರಂದು ಬೆಳಿಗ್ಗೆ 8.30ಕ್ಕೆ ಧಾರವಾಡ ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯ ಕೋರ್ಟ್ ಸರ್ಕಲ್‌ನಲ್ಲಿರುವ ಸಾಯಿಮಂದಿರದಲ್ಲಿ ಶ್ರೀ ಸಾಯಿ ವೃದ್ಧಾಶ್ರಮ ನೀಲನಕ್ಷೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿ ತಾಲೂಕಿನ ವರೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾ ಮಸ್ತಕಾಭಿಷೇಕ ಮತ್ತು ಪಂಚ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜನವರಿ 27ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡ ಜಿ.ಪಂನಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಂತರ ಅವರು ಅಂದು ರಾತ್ರಿ ನವದೆಹಲಿಗೆ ಪ್ರಯಾಣ ಬೆಳೆಸುವರೆಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 28ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ ಸಭಾಂಗಣದಲ್ಲಿ 2024-25ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮೂರನೇ ತ್ರೈ ಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸುವರು. ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ನವನಗರದ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್ ಸಮಸ್ಯೆಗಳ ಕುರಿತು ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ಜರುಗಿಸುವರು.