ದೂರು ಬರದಂತೆ ಕರ್ತವ್ಯ ನಿರ್ವಹಿಸಿ : ಸಂತೋಷ ಲಾಡ್

0
Minister Santhosh Lad suddenly visited Dharwad District Hospital Denghee Ward
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಶುಕ್ರವಾರ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಡೆಂಘೀ ವಾರ್ಡ್ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ, ಸೂಕ್ತ ಚಿಕಿತ್ಸೆ ಕುರಿತು ವಿಚಾರಿಸಿದರು.

Advertisement

ಜಿಲ್ಲಾಸ್ಪತ್ರೆಯ ಡೆಂಘೀ ವಾರ್ಡ್, ಎಲುಬು-ಕಿಲು ವಾರ್ಡ್, ಮಕ್ಕಳ ವಾರ್ಡ್ ಮತ್ತು ಫಾರ್ಮಸಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವಿಧ ತಾಲೂಕು, ಗ್ರಾಮಗಳ ರೋಗಿಗಳನ್ನು ಸ್ವತಃ ಮಾತಾಡಿಸಿ, ವೈದ್ಯರ ಸ್ಪಂದನೆ ಮತ್ತು ಸಕಾಲಕ್ಕೆ ಅಗತ್ಯ ಚಿಕಿತ್ಸೆ ನೀಡುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು.

Minister Santhosh Lad suddenly visited Dharwad District Hospital Denghee Ward

ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಡಿಎಸ್ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಪ್ರತಿದಿನ ವಾರ್ಡಗಳಿಗೆ ಭೇಟಿ ನೀಡಿ, ರೋಗಿಗಳಿಗೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ, ಔಷಧಿ ಸಿಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ರೋಗಿಗಳ ಅಹವಾಲುಗಳಿದ್ದರೆ ಆಲಿಸಬೇಕು. ರೋಗಿಗಳಿಗೆ ಅಗತ್ಯ ಸೇವೆ ಸಿಗದ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮಕೈಗೊಳ್ಳವುದಾಗಿ ಸಚಿವರು ವೈದ್ಯರಿಗೆ ಎಚ್ಚರಿಕೆ ನೀಡಿದರು.

ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರಕಾರದಿಂದ ಈಗಾಗಲೇ 9.9 ಕೋಟಿ ರೂ ಅನುದಾನ ಬಿಡುಗಡೆ ಆಗಿದ್ದು, ಆರೋಗ್ಯ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಟೆಂಡರ್ ಹಂತದಲ್ಲಿದೆ. ಅದನ್ನು ಬೇಗ ಪೂರ್ಣಗೊಳಿಸಿ, ಕ್ರಿಯಾಯೋಜನೆಯಲ್ಲಿರುವ ಎಸ್.ಟಿ.ಪಿ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಆರಂಭಿಸಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸಚಿವರು ನಿರ್ದೇಶಿಸಿದರು.

ಧಾರವಾಡ ಜಿಲ್ಲಾಸ್ಪತ್ರೆಗೆ ಉತ್ತರ-ಕನ್ನಡ, ಬೆಳಗಾವಿ, ಗದಗ, ಬಾಗಲಕೋಟ, ಹಾವೇರಿ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಧಾರವಾಡ ಜಿಲ್ಲೆಯ ಜೊತೆಗೆ ಹೊರ ಜಿಲ್ಲೆಗಳ ರೋಗಿಗಳನ್ನು ಸೂಕ್ತ ಚಿಕಿತ್ಸೆ ನೀಡಿ, ನಿಭಾಯಿಸುವ ಜವಾಬ್ದಾರಿ ಇದೆ. ಸರಕಾರದ ಅನುದಾನದೊಂದಿಗೆ ವಿವಿಧ ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಪಡೆದು, ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಸೂಕ್ತ ಯೋಜನೆ ರೂಪಿಸಿ, ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಡೆಂಘೀ ವಾರ್ಡ್ನಲ್ಲಿ ಮಹಿಳೆ, ಮಕ್ಕಳು, ವಯಸ್ಕರು ಸೇರಿ 49 ಜನ ಡೆಂಘೀ ಶಂಕಿತರು ದಾಖಲಾಗಿದ್ದಾರೆ. ಇವರಲ್ಲಿ ಮೂರು ಜನರಿಗೆ ಡೆಂಘೀ ಖಚಿತಪಟ್ಟಿದ್ದು, ಸೂಕ್ತ ಚಿಕಿತ್ಸೆಯೊಂದಿಗೆ ಆರೋಗ್ಯ ಸ್ಥಿರವಾಗಿದೆ. ಉಳಿದ ಎಲ್ಲ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅವರು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 1765 ಜನರಿಗೆ ಡೆಂಘೀ ಪರೀಕ್ಷೆ ಮಾಡಲಾಗಿದೆ. 334 ಜನರಲ್ಲಿ ಸೋಂಕು ಧೃಡಪಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

ಸಚಿವರ ಭೇಟಿ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾಸ್ಪತ್ರೆ ತಜ್ಞ ವೈದ್ಯರಾದ ಡಾ. ಶ್ರೀಧರ ಪಾಟೀಲ, ಡಾ. ಶಿಲ್ಪಾ ಭಟ್, ಡಾ. ಪ್ರಭು ಸಂಗಮ ಸೇರಿದಂತೆ ವಿವಿಧ ತಜ್ಞ ವೈದ್ಯರು, ಸ್ನಾತಕೊತ್ತರ ವೈದ್ಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ ಸುಮಾರು 1500 ಜನ ಹೊರ ರೋಗಿಗಳು ನೋಂದಣಿ ಆಗುತ್ತಾರೆ. ಸರಾಸರಿ ತಿಂಗಳಿಗೆ 28 ಸಾವಿರ ರೋಗಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಒತ್ತಡದ ಮದ್ಯೆಯೂ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಔಷಧಿ, ಮೂಲಸೌಕರ್ಯಗಳ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗಾಗಿ ಅಗತ್ಯ ಸೌಲಭ್ಯಗಳ ಕುರಿತು ಸಚಿವರಿಗೂ ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here