ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 3-4 ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಹಾನಿ ಉಂಟಾಗಿದೆ. ಹೆಸರು, ಉದ್ದು, ಸೋಯಾಬಿನ್, ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ, ಶುಂಠಿ ಇತ್ಯಾದಿ ಬೆಳೆಗಳಿಗೆ ಹಾನಿ ಉಂಟಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ಶನಿವಾರ ಅಣ್ಣಿಗೇರಿ ತಾಲೂಕಿನ ಮಣಕವಾಡ ಜಮೀನು, ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ, ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮಗಳಲ್ಲಿ ನಿರಂತರ ಮಳೆಯಿಂದ ಆಗಿರುವ ಬೆಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಪರಿಶೀಲನೆ ಮಾಡಿ, ಸಮರ್ಪಕವಾಗಿ ಸರ್ವೆ ಮಾಡಲಾಗುತ್ತಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಸಿಗಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.
ಬೆಳೆ ಹಾನಿಯಾಗಿರುವ ಹೊಲಗಳಿಗೆ ವಿಮೆ ಭರಿಸಿರುವ ರೈತರಿಗೆ ಮತ್ತು ವಿಮೆಯನ್ನು ಭರಿಸದೇ ಇರುವ ರೈತರಿಗೂ ಕೂಡ ಸರ್ಕಾರದಿಂದ ನಿರ್ದಿಷ್ಟ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕರಾದ ಎನ್.ಎಚ್. ಕೋನರಡ್ಡಿ, ಕುಂದಗೋಳ ಶಾಸಕರಾದ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ನವಲಗುಂದ ತಹಸೀಲ್ದಾರ ಸುಧೀರ ಸಾಹುಕಾರ, ಅಣ್ಣಿಗೇರಿ ತಹಸೀಲ್ದಾರ ಎಂ.ಜಿ. ದಾಸಪ್ಪನವರ, ಕುಂದಗೊಳ ತಹಸೀಲ್ದಾರ ರಾಜು ಮಾವರಕರ, ನವಲಗುಂದ ಪುರಸಭೆಯ ಮುಖ್ಯಾಧಿಕಾರಿ ಶರಣು ಪೂಜಾರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತರು, ವಿವಿಧ ಮುಖಂಡರು, ಕೃಷಿಕ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ರೈತರಾದ ಹೇಮಣ್ಣ ಕಳಸರೆಡ್ಡಿ ಮತ್ತು ಅಂದಪ್ಪ ಕುಂದುಗೋಳ ಅವರ ಜಮೀನುಗಳಿಗೆ ಭೇಟಿ ನೀಡಿ, ಮಳೆಯಿಂದ ಹಾನಿಗೆ ಒಳಗಾದ ಬೆಳೆಗಳನ್ನು ವೀಕ್ಷಣೆ ಮಾಡಿದರು. ಮಳೆಯಿಂದ ಹಾನಿಯಾದ ಶಿವಪ್ಪ ಬಸಪ್ಪ ಕೌಜಗೇರಿ ಹಾಗೂ ನಿಂಗಮ್ಮ ಕರಡಿ ಅವರ ಮನೆಗೆ ಭೇಟಿ ನೀಡಿ, ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅವರಿಗೆ ತಲಾ 25 ಸಾವಿರ ರೂ ನೆರವು ನೀಡಿದರು.