ಬೆಂಗಳೂರು:- ತಮ್ಮ ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಸುಳಿವು ಕೊಟ್ಟಿದ್ದಾರೆ.
ನಗರದಲ್ಲಿ ಪುತ್ರನ ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಅವರು, ನನ್ನ ಪುತ್ರ ಅರುಣ್ ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡುತ್ತಾರೆ. ಮುಂದೆ ಅವರಿಗೂ ಒಳ್ಳೆಯ ಭವಿಷ್ಯ ಸಿಗಲಿದೆ, ಅವರ ನಡವಳಿಕೆ ಅಷ್ಟು ಚೆನ್ನಾಗಿದೆ. ಅವರ ರಾಜಕೀಯ ಪ್ರವೇಶ ಆಗಿಯೇ ಆಗುತ್ತದೆ. ಬೆಂಗಳೂರೋ, ತುಮಕೂರೋ ಎಲ್ಲಿಂದ ರಾಜಕೀಯ ಪ್ರವೇಶ ಮಾಡುತ್ತಾರೆ ಗೊತ್ತಿಲ್ಲ. ಅದನ್ನೆಲ್ಲ ಪಕ್ಷ ಗಮನಿಸುತ್ತದೆ, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪುತ್ರನ ಹುಟ್ಟುಹಬ್ಬದ ದಿನವೇ ರಾಜಕೀಯ ಪ್ರವೇಶದ ಸಂದೇಶ ಕೊಟ್ಟರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಆಕಾಂಕ್ಷೆಯನ್ನು ಕೇಂದ್ರ ಸಚಿವ ವಿ ಸೋಮಣ್ಣ ಇದೇವೇಳೆ ಪರೋಕ್ಷವಾಗಿ ವ್ಯಕ್ತಪಡಿಸಿದರು. ಹೈಕಮಾಂಡ್‌ನವರಿಗೆ ಯಾರ‍್ಯಾರಿಗೆ ಯಾವ್ಯಾವ ಸ್ಥಾನ ಕೊಡಬೇಕು ಎಂದು ಗೊತ್ತಿದೆ. ಅಂಥ ಸಂದರ್ಭ ಬಂದಾಗ ವರಿಷ್ಠರು ಆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ವಿಷಯದಲ್ಲಿ ಯಾರ‍್ಯಾರು ಶಾಸಕರು ನನ್ನ ಪರ ಮಾತಾಡಿದ್ದಾರೋ ಅವರಿಗೆಲ್ಲ ನಾನು ಆಭಾರಿ ಆಗಿದ್ದೇನೆ. ಒಳ್ಳೆಯತನಕ್ಕೆ ಮಾತ್ರ ಬೆಲೆ ಸಿಗೋದು ಎಂದು ಹೇಳಿದರು.


