ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಲಕ್ಮೇಶ್ವರ ಪಟ್ಟಣ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು, ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ 7ನೇ ವಾರ್ಡಿನ ಜನ್ನತ್ ನಗರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ಹಲವು ವರ್ಷಗಳಿಂದ ಅಲ್ಪಸಂಖ್ಯಾತರ ಕಾಲೋನಿಗಳು ಅಭಿವೃದ್ಧಿಗಾಗಿ ಕಾದಿವೆ. ಅಲ್ಪಸಂಖ್ಯಾತರ ಕಾಲೋನಿಗಳು ಅಭಿವೃದ್ಧಿಯಾಗಬೇಕು. ಇಲ್ಲಿನ ಜನರಿಗೂ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಹೀಗೆ ಮೂಲಭೂತ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಜನ್ನತ್ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಮುಖ್ಯವಾಗಿ ಪಟ್ಟಣದ ದೂದಪೀರಾಂ ದರ್ಗಾ ರಸ್ತೆ ಅಭಿವೃದ್ಧಿಯಾಗಬೇಕು. ಅಲ್ಲದೇ ಬೆಳೆಯುತ್ತಿರುವ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿವಾಸಿಗರ ಸಹಕಾರದೊಂದಿಗೆ ಗುತ್ತಿಗೆದಾರರು ಆದಷ್ಟು ಬೇಗ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ವಿಜಯ ಮೆಕ್ಕಿ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಮಿತ್ ಬಿದರಿ, ಎಂ.ಆರ್. ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಜಾಕೀರಹುಸೇನ್ ಹವಾಲ್ದಾರ, ಗಿರೀಶ ಚೌರಡ್ಡಿ, ಗಂಗಾಧರ ಮೆಣಸಿನಕಾಯಿ, ಸಂತೋಷ ಜಾವೂರ, ಸಿದ್ದು ದುರಗಣ್ಣವರ, ಬಸವರಾಜ ಚಕ್ರಸಾಲಿ, ಜಾಂಗೀರಸಾಬ್ ಬಳಿಗಾರ, ಮೈನುದ್ದಿನ್ ಮೊಮೀನ್, ಮಹ್ಮದಗೌಸ ಹೂಲಗೂರ, ಮುನ್ನಾ ಹವಾಲ್ದಾರ, ಮಹಮ್ಮದಲಿ ಸಿದ್ದಿ ಸೇರಿ ಹಲವರಿದ್ದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪಿರ್ಧೋಸ್ ಆಡೂರ, ವಾರ್ಡಿನ ಸದಸ್ಯ ಬಸವರಾಜ ಓದುನವರ ಮಾತನಾಡಿ, ಪಟ್ಟಣದಲ್ಲಿನ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ 3 ಕೋಟಿ ರೂ ಅನುದಾನ ಲಭಿಸಿದೆ. ಇನ್ನಷ್ಟು ಅನುದಾನ ತರುವ ಮೂಲಕ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲಾಗುವುದು ಎಂದರು.