ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ನರಸಾಪೂರ ಗ್ರಾಮದ ಆಶ್ರಯ ಕಾಲೋನಿಯಲ್ಲಿರುವ 281ನೇ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ ಮತ್ತು ನೋಂದಣಿ’ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಅಂಚೆ ಇಲಾಖೆಯ ಹನಮಂತಪ್ಪ ಮ್ಯಾಳಾ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ವಿವಿಧ ಯೋಜನೆಗಳ ಫಲಾನುಭವಿಗಳ ಆಧಾರ್ ಸೀಡಿಂಗ್, ಸುಕನ್ಯ ಸಮೃದ್ಧಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಅಂಚೆ ಇಲಾಖೆ ಸಿಬ್ಬಂದಿ ಕವಿತಾ ರಡ್ಡೇರ್ ಹೆಣ್ಣುಮಕ್ಕಳಿಗೆ ಇರುವ ಉಳಿತಾಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಮೇಟಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಖಾ ಮಲ್ಲಾಪೂರ, ಆಶಾ ಕಾರ್ಯಕರ್ತೆಯರು ಮಾತನಾಡಿದರು. ಮಿಶನ್ ಶಕ್ತಿಗಾಗಿ 100 ದಿನಗಳ ವಿಶೇಷ ಜಾಗೃತಿ ಮತ್ತು ನೋಂದಣಿ ಕಾರ್ಯಕ್ರಮದಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ, ಭಾರತೀಯ ನ್ಯಾಯ ಸಂಹಿತೆ ತರಬೇತಿ, ಮಕ್ಕಳ ಮತ್ತು ಮಹಿಳೆಯರ ಸಂಬಂಧಿತ ಕಾನೂನು ಅರಿವು, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಪೋಸ್ಟ್, ಬ್ಯಾಂಕ್‌ಗಳಲ್ಲಿ ಮಹಿಳಾ ಆಧಾರಿತ ಯೋಜನೆಗಳು, ಕೌಟುಂಬಿಕ ದೌರ್ಜನ್ಯ ತಡೆ, ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ನಿಷೇಧ ಅರಿವು, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶೈಲಜಾ ಕೋಟೆಣ್ಣವರ, ಸಹಾಯಕಿ ಶರಣಪ್ಪ ಹಿರೇಮಠ, ಮಕ್ಕಳ ಪಾಲಕರಾದ ಐಶ್ವರ್ಯ ಹಿರೇಮಠ, ಪವಿತ್ರಾ ಮಡಿವಾಳರ, ಅನಿತಾ ಶಿಗ್ಲಿ, ನಗೀನಾ ಅಣ್ಣಿಗೇರಿ ಸೇರಿ ಹಲವರಿದ್ದರು.