ಹಾಸನ:- ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹೋಟೆಲ್ ನಲ್ಲೇ ಪ್ರಿಯತಮನಿಗೆ ಪ್ರೇಯಸಿ ಚಾಕು ಇರಿದಿರುವ ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ಜರುಗಿದೆ.
25 ವರ್ಷದ ಮನುಕುಮಾರ್ ಚಾಕು ಇರಿತಕ್ಕೊಳಗಾದ ಯುವಕ. ಭವಾನಿ ಚಾಕು ಇರಿದ ಯುವತಿ ಆಗಿದ್ದಾಳೆ. ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು, ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‍ಗೆ ಮನುಕುಮಾರ್ ಬಂದಿದ್ದ. ಈ ವೇಳೆ ಯುವತಿ ಪದೇ ಪದೇ ಮನುಕುಮಾರ್‌ಗೆ ಕರೆ ಮಾಡಿದ್ದಾಳೆ. ಬಳಿಕ ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿ ಬಂದ ಭವಾನಿ, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ.
ಅಷ್ಟರಲ್ಲಿ ಗೇಟ್ ಬಳಿ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಇರಿದಿದ್ದಾಳೆ.
ಗಾಯಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.