ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಅವರು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮ ವೀಕ್ಷಿಸಿ, ನಾಗಾಸಾಧುಗಳ ದರ್ಶನ ಭಾಗ್ಯ ಪಡೆದರು.
ಅತಿರುದ್ರ ಮಹಾಯಜ್ಞ ನಡೆಯುತ್ತಿರುವ ಪರಿಸರದಲ್ಲಿ ವಿದ್ಯಾರ್ಥಿನಿ ವಿನಲ್ ಕಟವಟೆ ಸುಮಾರು 108 ಪ್ರದಕ್ಷಣೆ ಹಾಕಿ ಲೋಕಕಲ್ಯಾಣದ ಯಜ್ಞದಲ್ಲಿ ಭಕ್ತಿಭಾವವನ್ನು ಪ್ರದರ್ಶಿಸಿದರು. ಈ ಭಕ್ತಿಭಾವವನ್ನು ಗಮನಿಸಿದ ನಾಗಾಸಾಧು ಸಹದೇವಾನಂದ ಗಿರಿ ಗುರೂಜಿ ಮಹಾರಾಜ ವಿನಲ್ ಕಟವಟೆ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಪ್ರಪ್ರಥಮ ಬಾರಿಗೆ ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾಧು ಶ್ರೀ ಸಹದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದಲ್ಲಿ ವಿಶೇಷ ಹೋಮ-ಹವನ ಪೂಜೆ ಕಾರ್ಯಕ್ರಮಗಳು ವೀಕ್ಷಿಸಿ ಶಿವಲಿಂಗದ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ.
ಅತಿರುದ್ರ ಮಹಾಯಜ್ಞ ಸಮಿತಿ ಅಧ್ಯಕ್ಷ ಕಿರಣ ಭೂಮಾ, ರಾಜು ಕುರುಡಗಿ, ಎಸ್.ಎಚ್. ಶಿವನಗೌಡ್ರ, ರವಿ ಗುಂಜಿಕರ, ರಮೇಶ ಸಜ್ಜಗಾರ, ರವಿ ಮಾನ್ವಿ, ಪ್ರಶಾಂತ ನಾಯಕರ ಮುಂತಾದವರು ಉಪಸ್ಥಿತರಿದ್ದರು.



