ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಾ. 12ರಂದು ಶಿರಹಟ್ಟಿ ಪಟ್ಟಣದ ಗುರುನಾಥ ಬಡಿಗೇರ, ಶರಣಪ್ಪ ಬಡಿಗೇರ, ಮಹೇಶ ಬಡಿಗೇರ, ವಿನೋದಕುಮಾರ ಎಂಬುವರು ಹಿರೇಮಠ ಮದಲಗಟ್ಟಿ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದಾಗ ಮತ್ತು 3 ತಿಂಗಳ ಹಿಂದೆ ಮಕ್ತುಂಪುರ ಗ್ರಾಮದ ಯುವಕ ತನ್ನ ಮಕ್ಕಳು ಹಾಗೂ ತಂಗಿಯ ಮಗನನ್ನು ಕೊರ್ಲಹಳ್ಳಿ ಸೇತುವೆ ಮೇಲಿಂದ ಎಸೆದು ತಾನೂ ಮೃತಪಟ್ಟ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಿಸಿದರು.
ಮತಕ್ಷೇತ್ರದ ಬೆಳ್ಳಟ್ಟಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬನ್ನಿಕೊಪ್ಪ, ಕಡಕೋಳ, ಮಜ್ಜೂರ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಬೇಕು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಕ್ಷೇತ್ರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಕುರಿತು ಸದನದ ಗಮನಕ್ಕೆ ತಂದಿದ್ದಾರೆ. ನೀರಾವರಿ ಯೋಜನೆಗೆ 197 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಮತ್ತು 20 ಕೆರೆಗಳನ್ನು ತುಂಬಿಸುವ ಯೋಜನೆ ಅಡಿಯಲ್ಲಿ ಕೆಲಸವನ್ನು ಮಾಡದೇ ಬಿಲ್ ಪಾವತಿಸಿದ್ದನ್ನು ಪರಿಶೀಲಿಸಲು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.