ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಗುರುವಾರ ಮಂಜಪ್ಪ ಹುಚ್ಚಮ್ಮನವರ್ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಸುದ್ದಿ ತಿಳಿದ ಶಾಸಕ ಡಾ. ಚಂದ್ರು ಲಮಾಣಿ ಅವರು ಬಾಲೇಹೊಸೂರು ಗ್ರಾಮದ ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಹಾನಿಗೊಳಗಾದ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಾಲೇಹೊಸೂರು ಗ್ರಾಮದ ರೈತ ಮಂಜಪ್ಪ ತಿಪ್ಪಣ್ಣ ಹುಚ್ಚಣ್ಣನವರ ಅವರಿಗೆ ಸೇರಿದ ಗುಡಿಸಲಿಗೆ ಮಧ್ಯಾಹ್ನ ಹೊತ್ತಿಕೊಂಡಿದ್ದ ಆಕಸ್ಮಿಕ ಬೆಂಕಿಯಿಂದ ಗುಡಿಸಲಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದವಸಧಾನ್ಯ, ಗೃಹ ಬಳಕೆ ವಸ್ತುಗಳು, ಬಟ್ಟೆ-ಬರೆ, 50 ಸಾವಿರ ನಗದು, 20 ಗ್ರಾಂ ಬಂಗಾರ ಇತರೇ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಗಳ ನಷ್ಟ ಸಂಭವಿಸಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ ನೆರವು ದೊರಕಿಸುವದಾಗಿ ಭರವಸೆ ನೀಡಿದರು. ಅವರಿಗೆ ಸೂಕ್ತ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ ವಾಸುದೇವ ಸ್ವಾಮಿ, ಇಲಾಖೆ ವತಿಯಿಂದ ಹುಚ್ಚಣ್ಣವರ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿದರು. ಅಲ್ಲದೆ ಗ್ರಾ.ಪಂ ವತಿಯಿಂದ 10 ಸಾವಿರ ರೂಗಳ ಪರಿಹಾರ ಧನದ ಚೆಕ್‌ನ್ನು ತಾ.ಪಂ ಇಓ ಕೃಷ್ಣಪ್ಪ ಧರ್ಮರ ನೀಡಿದರು.
ಈ ವೇಳೆ ಮುಖಂಡರಾದ ನಾಗಯ್ಯ ಮಠಪತಿ, ಜಿ.ಆರ್. ಕುಬೇರ, ಸಿದ್ದಪ್ಪ ನೆಗೆನಹಳ್ಳಿ, ಫಕ್ಕೀರೇಶ ರಟ್ಟಿಹಳ್ಳಿ, ಸಂಜೀವ ಸಾಲಿ, ಕೆ.ಬಿ. ಮೂಲಿಮನಿ, ಗುರುಪಾದಯ್ಯ ಮಠಪತಿ, ಪರಸುರಾಮ ಮೈಲಾರಿ, ನಾಗಪ್ಪ ಸಣ್ಣತೋಟಗೇರ, ವಿರೂಪಾಕ್ಷಪ್ಪ ಮರಳಿಹಳ್ಳಿ, ಹನುಮಂತ ಪುಟ್ಟಮ್ಮನವರ, ನಿಂಗಪ್ಪ ಪ್ಯಾಟಿ, ಹೊನ್ನಪ್ಪ ಹುಚ್ಚಮ್ಮನವರ್, ನೀಲಪ್ಪ ಮಾಯಕೊಂಡ, ಪಿಡಿಓ ಶೇಖರಗೌಡ ವಡಕನಗೌಡ್ರ ಸೇರಿ ಕಂದಾಯ ಇಲಾಖೆ ಸಿಬ್ಬಂದಿಗಳಿದ್ದರು.