ತೀವ್ರ ಸ್ವರೂಪ ಪಡೆದ ಹೋರಾಟ

0
MLA for indefinite satyagraha. Chandru Lamani Sath
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಸಂಘಟನೆಯವರು ಕಳೆದ 3 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಸತ್ಯಾಗ್ರಹಕ್ಕೆ ಶುಕ್ರವಾರ ಶಾಸಕ ಡಾ. ಚಂದ್ರು ಲಮಾಣಿ ಸಾಥ್ ನೀಡಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

Advertisement

ಅ.12ರಂದು ದಸರಾ ಹಬ್ಬದ ದುರ್ಗಾದೇವಿ ಮೆರವಣಿಗೆ ದಿನ ಅನ್ಯ ಕೋಮಿನ ಯುವಕರು ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆಂದು ಗೋಸಾವಿ ಸಮಾಜದವರು ಠಾಣೆಗೆ ದೂರು ಕೊಡಲು ಹೋದಾಗ ಅವರ ಮೇಲೆಯೇ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಹಾರ ಮಾಡಿದ್ದಾರೆಂದು ಆರೋಪಿಸಿ ಅ.19ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿ ಪಿಎಸ್‌ಐ ಅಮಾನತ್ತಿಗೆ ಆಗ್ರಹಿಸಲಾಗಿತ್ತು. ಇಷ್ಟಾಗಿಯೂ ಪಿಎಸ್‌ಐ ಮೇಲೆ ಯಾವುದೇ ಕ್ರಮವಾಗದ್ದರಿಂದ ಕಳೆದ 3 ದಿನಗಳಿಂದ ತಹಸೀಲ್ದಾರ ಕಚೇರಿಯ ಎದುರೇ ದೀಪಾವಳಿ ಹಬ್ಬವನ್ನೂ ಆಚರಿಸದೇ ಮತ್ತೆ ಹೋರಾಟ ಮಾಡುತ್ತಿದ್ದಾರೆ.

ಆದರೆ ಶುಕ್ರವಾರ ಸಂಜೆ ಶಾಸಕರು ಹೋರಾಟಕ್ಕೆ ಬೆಂಬಲ ನೀಡಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಧರಣಿ ನಿರತರೊಂದಿಗೆ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಹಿಂದೂ-ಮುಸ್ಲಿಂ ಭಾವೈಕ್ಯತೆಯ ನೆಲದಲ್ಲಿ ಅಂದು ನಡೆದ ಸಣ್ಣ ಘಟನೆಯನ್ನು ಪಟ್ಟಣದ ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಬಹುದಿತ್ತು. ಆದರೆ ನ್ಯಾಯ ಕೇಳಲು ಹೋದ ಮಹಿಳೆಯರೂ ಸೇರಿ ಹಲವರ ಮೇಲೆ ಪಿಎಸ್‌ಐ ಮನಸೋ ಇಚ್ಛೆ ಹಲ್ಲೆ ಮಾಡಿದ್ದರಿಂದ ಎಂಎಲ್‌ಸಿ ಪ್ರಕರಣ ದಾಖಲಾಗಿದೆ. ಸ್ವತಃ ನಾನೂ ಹಲ್ಲೆಗೊಳಗಾದವರನ್ನು ನೋಡಿ ಬಂದಿದ್ದೇನೆ. ಇದನ್ನು ವಿರೋಧಿಸಿ ಪೂರ್ವ ನಿರ್ಧಾರದಂತೆ ಶ್ರೀರಾಮಸೇನೆ ಸೇರಿ ಹಿಂದೂಪರ ಸಂಘಟನೆಯವರು ಲಕ್ಷ್ಮೇಶ್ವರ ಬಂದ್ ಕರೆ ನೀಡಿದ್ದರು.

ಈ ಸಂದರ್ಭದಲ್ಲಿ ಗದುಗಿನ ದಲಿತ ಮಿತ್ರಮೇಳದ ಅಧ್ಯಕ್ಷ ಕುಮಾರ ನಡಗೇರಿ, ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಪ್ರವೀಣ ಕುಂಬಾರ, ಚಿನ್ನು ಹಾಳದೋಟದ, ಚಂದ್ರು ಕರ್ಜೇಕಣ್ಣವರ, ಮಂಜು ಕೋಡಳ್ಳಿ, ಬಾಳಪ್ಪ ಗೋಸಾವಿ, ಹರೀಶ ಗೋಸಾವಿ, ವೆಂಕಟೇಶ ದೊಡ್ಡಮನಿ, ಹುಲಿಗೆಪ್ಪ ವಾಲ್ಮೀಕಿ, ಮಂಜುನಾಥ ಬಡ್ಡಿವಡ್ಡರ, ಅಭಿಷೇಕ ಕುರ್ತಕೋಟಿ, ಬಸು ನವಲಿ, ಬಸವರಾಜ ಭಜಂತ್ರಿ, ಶಿವಪ್ಪ ಕಟಗಿ ಸೇರಿ ಹಲವರಿದ್ದರು.

ಹೋರಾಟವನ್ನು ಹತ್ತಿಕ್ಕಿಸುವ ಮತ್ತು ಇಂತಹ ಅಧಿಕಾರಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಿಎಸ್‌ಐ ಕುಮ್ಮಕ್ಕಿನಂತೆ ಕೆಲವೊಂದು ಸಂಘಟನೆಗಳಿಂದ ಬಂದ್‌ಗೆ ವಿರೋಧ ವ್ಯಕ್ತವಾಗುವಂತೆ ನೋಡಿಕೊಂಡಿದ್ದರು. ಅದಕ್ಕಾಗಿಯೇ 163 ಕಲಂ ಜಾರಿ ಮಾಡಲಾಗಿತ್ತು. ಘಟನೆಯ ತೀವ್ರ ಬೆಳವಣಿಗೆಗೆ ಕಾರಣರಾದ ಪಿಎಸ್‌ಐ ಅವರು ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬದ ಆಚರಣೆ, ಸಣ್ಣ ಕಾರಣಗಳಿಗೂ ನ್ಯಾಯ ಕೇಳಲು ಹೋದವರ ಮೇಲೆ 107 ಕೇಸ್ ದಾಖಲು ಮಾಡುವುದು ಸೇರಿ ಇವರ ಅಧಿಕಾರ ದುರ್ಬಳಕೆಯ ಎಲ್ಲ ಮಾಹಿತಿಗಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋಗಳನ್ನು ಎಸ್‌ಪಿ ಕಚೇರಿಯಿಂದ ಪಡೆಯುತ್ತೇನೆ. ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆಯವರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here