ವಿಜಯಸಾಕ್ಷಿ ಸುದ್ದಿ, ರೋಣ: ಜಿಗಳೂರ ಕೆರೆಯ 11 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಟ್ರೀ ಪಾರ್ಕ್ ನಿರ್ಮಿಸಲು ಈಗಾಗಲೇ ಕಾರ್ಯಾರಂಭವಾಗಿದ್ದು, ಅತಿ ಶೀಘ್ರದಲ್ಲಿ ಜಿಗಳೂರ ಕೆರೆ ಪ್ರವಾಸಿ ತಾಣವಾಗಲಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪುರಸಭೆಯ ಆವರಣದಲ್ಲಿ ಜರುಗಿದ 99.83 ಲಕ್ಷ ರೂಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಧಿ ಯೋಜನೆಯಡಿ ಕಾರ್ಯಕ್ರಮದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
2013 ಹಾಗೂ 18ರ ಅವಧಿಯಲ್ಲಿ ರೋಣ ಪಟ್ಟಣದಲ್ಲಿರುವ ಕೆರೆಯ ಸೌಂದರ್ಯ ಹೆಚ್ಚಿಸಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 1 ಕೋಟಿ 60 ಲಕ್ಷ ರೂಗಳನ್ನು ಖರ್ಚು ಮಾಡಿದ್ದರು. ನಂತರ ಅಬಿವೃದ್ಧಿ ಕಾರ್ಯ ಸ್ಥಗಿತಗೊಂಡಿತ್ತು. ಈಗ ಉಳಿದ 40 ಲಕ್ಷ ಅನುದಾನದ ಜೊತೆಗೆ ಮತ್ತೆ 50 ಲಕ್ಷ ರೂ ಅನುದಾನವನ್ನು ಒದಗಿಸಲಾಗಿದ್ದು, ಈ ಕಾರ್ಯ ಕೂಡ ಶೀಘ್ರವೇ ಮುಗಿಯಲಿದೆ. ರೋಣ ಹಾಗೂ ಜಿಗಳೂರ ಕೆರೆಗಳ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿ ತಾಣಗಳಾಗಿ ಮಾರ್ಪಡಿಸುವ ಗುರಿಯನ್ನು ಹೊಂದಿದೆ ಎಂದರು.
ಈಗಾಗಲೇ ಪಟ್ಟಣದಲ್ಲಿ ಡಬಲ್ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿ ಇತರೆ ಕಾಮಗಾರಿಗಳಿಗೆ ಚಾಲನೆ ನಿಡಲಾಗಿದ್ದು, 13 ಕೋಟಿ ರೂ ವೆಚ್ಚದಲ್ಲಿ ಅಬ್ಬಿಗೇರಿ ರಸ್ತೆಯ ಮಲಪ್ರಭಾ ಬಲದಂಡೆಯಿAದ ಮುದೇನಗುಡಿ ಕ್ರಾಸ್‌ವರೆಗೆ ಸಿಸಿ ರಸ್ತೆ ಮತ್ತು 7 ಕೋಟಿ ರೂಗಳ ವೆಚ್ಚದಲ್ಲಿ ಕುರಹಟ್ಟಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರೋಣ ಪಟ್ಟಣದ ಸಮಗ್ರ ಅಭಿವೃದ್ಧಿಗೆ 13 ಕೋಟಿ ರೂಗಳ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದು, ಇಷ್ಟರಲ್ಲೇ ಅನುದಾನ ಬಿಡಗಡೆಯಾಗಲಿದೆ ಎಂದರು.
ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸಂಗನಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ಯೂಸುಪ್ ಇಟಗಿ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೆಟಗೇರಿ, ನಾಜಬೇಗಂ ಯಲಿಗಾರ, ವಿದ್ಯಾ ದೊಡ್ಡಮನಿ, ರಮೇಶ ಹೊಸಮನಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ರೈತರ ಹಿತದೃಷ್ಟಿಯಿಂದ 2 ಎಕರೆ ಜಮೀನಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸಹ ಮುಂದಾಗಿದೆ. ಅಲ್ಲದೆ ತಾಲೂಕಿನ ಶಾಲಾ ಕೊಠಡಿಗಳ ಸುರ‍್ಷತೆಗಾಗಿ ಸಿಎಂ ವಿಶೇಷ ನಿಧಿಯಿಂದ 3 ಕೋಟಿ, ಎಸ್.ಆರ್. ಪಾಟೀಲ ಶಾಲಾ ಅಭಿವೃದ್ಧಿಗೆ ಎಂ ಎಂಎಲ್ ನಿಂದ 50 ಲಕ್ಷ ರೂ, ಸಿಎಂ ವಿಶೇಷ ನಿಧಿಯಿಂದ 50 ಲಕ್ಷ ರೂಗಳ ಅನುದಾನವನ್ನು ಒದಗಿಸಲಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿರುವ 37 ಎಕರೆ ಜಮೀನಿನಲ್ಲಿ ಬಡವರಿಗೆ ಆಶ್ರಯ ಒದಗಿಸಲು ಪುರಸಭೆ ಮುಂದಾಗಬೇಕು. ಮುಖ್ಯವಾಗಿ ಪುರಸಭೆಯ ನೂತನ ಕಟ್ಟಡಕ್ಕೆ ಶೀಘ್ರವೇ ಭೂಮಿಪೂಜೆ ನಡೆಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.