ವಿಜಯಸಾಕ್ಷಿ ಸುದ್ದಿ, ನರೇಗಲ್ : 15 ಕೋಟಿ ರೂ ಯೋಜನೆಯ ಈ ಕಾರ್ಯದಿಂದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಇದರ ಸದುಪಯೋಗವನ್ನು ಪಟ್ಟಣ ಮತ್ತು ಮಜಿರೆ ಗ್ರಾಮಗಳ ಎಲ್ಲ ನಾಗರಿಕರೂ ಪಡೆದುಕೊಳ್ಳಬೇಕೆಂದು ರೋಣ ಶಾಸಕ, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪ.ಪಂ ಹತ್ತಿರ ಭಾನುವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪಟ್ಟಣ ಪಂಚಾಯತಿ ನರೇಗಲ್ಲ ಇವರ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನಯಡಿ ಅಂದಾಜು 1551 ಲಕ್ಷ ರೂಗಳ ವೆಚ್ಚದಲ್ಲಿ ಕುಡಿಯುವ ನೀರು ವಿತರಣಾ ಜಾಲವನ್ನು ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ದೇಶದೆಲ್ಲೆಡೆ ಈಗಾಗಲೇ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ವಿತರಣಾ ಜಾಲವನ್ನು ಅಳವಡಿಸುವ ಕಾರ್ಯದ ಮೊದಲ ಹಂತವು ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಪ್ರಸ್ತುತ 2ನೇ ಹಂತದ ಕಾಮಗಾರಿಗಳಿಗೆ ಕ್ಷೇತ್ರದಲ್ಲಿ ಚಾಲನೆ ನೀಡಲಾಗುತ್ತಿದೆ. ನರೇಗಲ್ ಪಟ್ಟಣ ಮಜರೆ ಗ್ರಾಮಗಳ ಜನರ ಸಂಪೂರ್ಣ ಸಹಕಾರ ಪಡೆದುಕೊಂಡು ಗುತ್ತಿಗೆದಾರರು ಪಟ್ಟಣದ ಪ್ರತಿಯೊಂದು ಮನೆಗಳಿಗೆ ನೀರು ಪೂರೈಕೆ ಮಾಡಲು ಮುಂದಾಗಬೇಕಿದೆ ಎಂದರು.
ಗುತ್ತಿಗೆದಾರರು ಯಾವುದೇ ಫಲಾಪೇಕ್ಷೆ ಇಲ್ಲದೆ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕರು ಖಡಕ್ ಎಚ್ಚರಿಕೆಯನ್ನು ನೀಡಿದರು.
ನರೇಗಲ್ ಪಟ್ಟಣ ಅಭಿವೃದ್ಧಿಗೆ ಈಗಾಗಲೇ ಪ.ಪಂನ 2 ಕೋಟಿ ರೂ ಅನುದಾನದಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಯಾವ ಗುತ್ತಿಗೆದಾರರು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗುತ್ತಾರೋ ಅವರು ಮಾತ್ರ ಈ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುವುದು. ನರೇಗಲ್ಲ-ತೊಂಡಿಹಾಳ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಹದಗೆಟ್ಟು ಹೋಗಿರುವ ವಿಷಯ ನನ್ನ ಗಮನಕ್ಕೆ ಬಂದಿದೆ.
ಕೂಡಲೇ ಈ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ನರೇಗಲ್ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈವೇಳೆ ಐ.ಎಸ್. ಪಾಟೀಲ, ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ಪ.ಪಂ ಸದಸ್ಯರಾದ ದಾವೂದಲಿ ಕುದರಿ, ಮುತ್ತಪ್ಪ ನೂಲ್ಕಿ, ಈರಪ್ಪ ಜೋಗಿ, ಫಕೀರಪ್ಪ ಬಂಬ್ಲಾಪೂರ, ಡಾ. ಕೆ.ಬಿ. ಧನ್ನೂರ, ಎಂ.ಎಸ್. ಧಡೇಸೂರಮಠ, ಬಾಳಪ್ಪ ಸೊಮಗೊಂಡ, ನರೇಗಲ್ ಬ್ಲಾಕ್ ಎಸ್.ಟಿ ಘಟಕದ ಅಧ್ಯಕ್ಷ ಶೇಖಪ್ಪ ಜುಟ್ಲ, ಶಹರ ಘಟಕದ ಅಧ್ಯಕ್ಷೆ ರೇಣುಕಾ ಧರ್ಮಾಯತ, ನಿಂಗನಗೌಡ ಲಕ್ಕನಗೌಡ್ರ, ಅಲ್ಲಾಭಕ್ಷಿ ನದಾಫ್, ಮೈಲಾರಪ್ಪ ಚಳ್ಳಮರದ, ಕಳಕನಗೌಡ ಪೊಲೀಸ್‌ಪಾಟೀಲ, ಶೇಖಪ್ಪ ಕೆಂಗಾರ್, ಎ.ಎ. ನವಲಗುಂದ, ಎಚ್.ಎಚ್. ಅಬ್ಬಿಗೇರಿ, ಮೈಲಾರಪ್ಪ ಹೋಡಿ, ಸಕ್ರಪ್ಪ ಹಡಪದ, ಯಲ್ಲಪ್ಪ ಮಣ್ಣೊಡ್ಡರ, ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಮಳ್ಳಿ, ಅರುಣ ಕಾಮತ್, ರಮೇಶ ಮಲ್ಲೇದ, ಪ್ರಕಾಶ ಪಾದಗಟ್ಟಿ, ಬಸವರಾಜ ಅಬ್ಬಿಗೇರಿ, ಪ.ಪಂ ಮುಖ್ಯಧಿಕಾರಿ ರಮೇಶ ಹೊಸಮನಿ, ಪ.ಪಂ ಸಿಬ್ಬಂದಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಮಾಧ್ಯಮ ಪ್ರತಿನಿಧಿಗಳ ಕಡೆಗಣನೆ
ಭೂಮಿಪೂಜೆ ಕಾರ್ಯಕ್ರಮದಲ್ಲಿ ಪ.ಪಂ ಮುಖ್ಯಾಧಿಕಾರಿ ರಮೇಶ ಹೊಸಮನಿ ಮಾಧ್ಯಮದವರನ್ನು ಸಂಪೂರ್ಣವಾಗಿ ಕಡೆಗಣಿಸಿದ ಪ್ರಸಂಗ ನಡೆಯಿತು. ಭೂಮಿಪೂಜೆ ಕಾರ್ಯಕ್ರಮದ ವರದಿಯನ್ನು ಮಾಡಲು ಬಂದ ವರದಿಗಾರರಿಗೆ ಮುಖ್ಯಾಧಿಕಾರಿ ಕಿಂಚಿತ್ತೂ ಗಮನ ನೀಡಲಿಲ್ಲ. ಶಾಸಕರು ಮಾತನಾಡುವಾಗ ಸ್ಥಳದಲ್ಲಿದ್ದ ಮಾಧ್ಯಮದವರಿಗೆ ಕೂರಲು ಆಸನಗಳ ವ್ಯವಸ್ಥೆ ಮಾಡದೆ ಅಗೌರವ ತೋರಿದರು. ಹೀಗಾಗಿ ಪತ್ರಕರ್ತರು ಸುಮಾರು ಅರ್ಧ ಗಂಟೆ ನಿಂತುಕೊಂಡೇ ಶಾಸಕರ ಭಾಷಣದ ವರದಿಯನ್ನು ಬರೆದುಕೊಳ್ಳಬೇಕಾಯಿತು. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಪ.ಪಂ ಮುಖ್ಯಾಧಿಕಾರಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಹೋಬಳಿ ಘಟಕದ ಗೌರವಾಧ್ಯಕ್ಷ ಅರುಣ ಬಿ.ಕುಲಕರ್ಣಿ, ಅಧ್ಯಕ್ಷ ಆದರ್ಶ ಕುಲಕರ್ಣಿ ಮತ್ತಿತರ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.