ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದಿ. ರಾಕೇಶ ಸಿದ್ದರಾಮಯ್ಯ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಹೆಸರಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಉತ್ತಮವಾಗಿ ನಡೆಸುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದು ಶಾಸಕ, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

Advertisement

ನಗರದ ಕಳಸಾಪೂರ ರಸ್ತೆಯಲ್ಲಿರುವ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಲೇಜಿನ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಶ್ರೀ ರಾಕೇಶ ಸಿದ್ದರಾಮಯ್ಯ ಸಭಾಭವನದಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಎಲ್ಲ ವರ್ಗದ ಜನರಿಗಾಗಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿದೆ. ಮೊದಲು ಗುಡಿ ಕೈಗಾರಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಈಗ ಡೊಮೆಸ್ಟಿಕ್ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಇಲಾಖೆಯ ಪ್ರಮಾಣಪತ್ರ ನೀಡಿ ಅನುಕೂಲ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳು ಕಷ್ಟಪಟ್ಟರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರ ಅಪ್ತಕಾರ್ಯದರ್ಶಿ ಅಶೋಕ ಮಿರ್ಜಿ ಮಾತನಾಡಿ, ವಿದ್ಯಾರ್ಥಿಗಳಾದವರು ಯಾವುದೇ ಕೆಲಸವಾಗಲಿ ಆತ್ಮವಿಶ್ವಾಸದಿಂದ, ಶ್ರದ್ಧೆಯಿಂದ ಮಾಡಬೇಕು. ಈ ಹಿಂದೆ ಐಟಿಐ ಕೋರ್ಸ್ಗೆ ಪ್ರವೇಶ ಸಿಗುತ್ತಿರಲಿಲ್ಲ. ಈಗ ಸಾಕಷ್ಟು ಅವಕಾಶಗಳು ಇರುವದರಿಂದ ಐಟಿಐ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಜೀವನದಲ್ಲಿ ಉತ್ತಮ ಆಯ್ಕೆಯೇ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ವೇದಿಕೆಯ ಮೇಲೆ ರಾಕೇಶ ಸಿದ್ದರಾಮಯ್ಯ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ರೊಳ್ಳಿ, ಕಾಳಿದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ವೈ.ಬಿ. ಬಾಣಾಪೂರ, ವಿ.ಆರ್. ಗುಡಿಸಾಗರ, ಬಾವಿಕಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ದ್ರಾಕ್ಷಾಯಣಿ ಪಾಟೀಲ, ವೈ.ಬಿ. ಕತ್ತಿ, ಮಲ್ಲೂರ ಬಸವರಾಜ, ಮಹಾಂತೇಶ ಕೆ, ಬಸವರಾಜ ನವಲಗುಂದ, ಯೂಸೂಫ್ ಇಟಗಿ, ಕೆ.ಬಿ. ಕಂಬಳಿ, ಯಲ್ಲಪ್ಪ ಗುರಿಕಾರ, ಶಿವಣ್ಣ ಸಿಂಗಟಾಲಕೇರಿ ಮುಂತಾದವರು ಉಪಸ್ಥಿತರಿದ್ದರು.
ಬಸಪ್ಪ ಹ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಲದ್ದಿ ಕಾರ್ಯಕ್ರಮ ನಿರೂಪಿಸಿದರು. ಪ್ರಾ. ರಮೇಶ ವಡವಿ ವಂದಿಸಿದರು.

ಇಂದಿನ ದಿನಗಳಲ್ಲಿ ಪ್ರಯತ್ನ ಮಾಡಿದರೆ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಪಡೆಯಬಹುದು. ಆದರೆ ದೊರಕಿರುವ ಅನುದಾನವನ್ನು ಸದುಪಯೋಗಪಡಿಸಿಕೊಳ್ಳುವ ಸಂಸ್ಥೆಗಳು ವಿರಳವಾಗಿವೆ. ಇವುಗಳ ನಡುವೆ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ಸಮಾಜಕ್ಕಾಗಿ ಹಾಗೂ ಸಾರ್ವಜನಿಕರಿಗಾಗಿ ತನ್ನದೇ ಆದ ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಾ, ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವದರಿಂದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

 


Spread the love

LEAVE A REPLY

Please enter your comment!
Please enter your name here