ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ಅಮೃತ-2 ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಮತ್ತೊಂದು ಸಭೆ ನಡೆಯುವರೆಗೆ ಕಾಮಗಾರಿ ನಿಲ್ಲಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ-2 ಯೋಜನೆಯನ್ನು ವೈಜ್ಞಾನಿಕ ಮಾದರಿಯಲ್ಲಿ ನಡೆಸುತ್ತಿಲ್ಲ ಎನ್ನುವ ಸದಸ್ಯರ ಆರೋಪ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತಗೆದುಕೊಂಡರು.
ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ಸುದೀರ್ಘ ಬಾಳಿಕೆ ಬರುವಂತಾಗಬೇಕು. ಪಟ್ಟಣದ 23 ವಾರ್ಡ್ಗಳಲ್ಲಿ ಕಾಮಗಾರಿ ನಡೆಯಲಿದ್ದು, ಹಂತ ಹಂತವಾಗಿ ಕಾಮಗಾರಿ ಮುಗಿದ ಬಳಿಕ ಇನ್ನೊಂದು ವಾರ್ಡ್ಗೆ ತೆರಳಬೇಕು.
ಕಾಮಗಾರಿ ನಡೆಸುವ ವೇಳೆ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತರಬೇಕು. ಅಲ್ಲದೆ ಮುಂದಿನ ಸಭೆಗೆ ಮುಖ್ಯ ಗುತ್ತಿಗೆದಾರರು ಆಗಮಿಸಿ ಕಾಮಗಾರಿಯ ಸಂಪೂರ್ಣ ಮಾಹಿತಿ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸೂಚಿಸಿದರು.
ಪಟ್ಟಣದಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ಯೋಜನೆಯಡಿ ನಡೆಸುವ ಕಾಮಗಾರಿಗಳನ್ನು ನಡೆಸಲು ಸಭೆಯ ಅನುಮತಿ ಕೇಳಿದಾಗ ಸದಸ್ಯ ಮುರ್ತುಜಾ ಡಾಲಾಯತ್, ಕಳೆದ ಸಭೆಯಲ್ಲಿ ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಮಹೇಶ ಪಾಟೀಲ ಹಾಗೂ ಬಸವರಾಜ ಬಂಕದ ಅವರಿಗೆ ಕಾಮಗಾರಿ ನೀಡಬಾರದೆಂದು ಠರಾವು ಪಾಸ್ ಮಾಡಲಾಗಿದೆ. ಆದರೆ ಈಗ ಬಿಲೋ ಹೋಗಿದ್ದಾರೆ ಎಂದು ಮತ್ತೆ ಅವರಿಗೆ ಗುತ್ತಿಗೆ ನೀಡಿದರೆ ಕಳಪೆ ಕಾಮಗಾರಿ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದಾಗ, ಮುದಿಯಪ್ಪ ಮುಧೋಳ, ಉಮೇಶ ರಾಠೋಡ ಧ್ವನಿಗೂಡಿಸಿದರು.
ಕಾಮಗಾರಿಯ ಗುಣಮಟ್ಟದ ಜವಾಬ್ದಾರಿ ಹೊತ್ತುಕೊಳ್ಳುವದಾಗಿ ಪುರಸಭೆ ಅಭಿಯಂತರ ಉಮೇಶಗೌಡ ಓಜನಹಳ್ಳಿ ಹೇಳಿದಾಗ, ಕಾಮಗಾರಿ ಬಿಲ್ ಮಾಡುವಾಗ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತಂದು ಬಿಲ್ ಮಾಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅಭಿಯಂತರರಿಗೆ ತಾಕೀತು ಮಾಡಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಸದಸ್ಯರಾದ ಯಮನೂರ ತಿರಕೋಜಿ, ರಾಜು ಸಾಂಗ್ಲಿಕರ, ಯು.ಆರ್. ಚನ್ನಮ್ಮನವರ, ಶಿವರಾಜ ಘೋರ್ಪಡೆ, ರೂಪೇಶ ರಾಠೋಡ, ಕನಕಪ್ಪ ಅರಳಿಗಿಡದ, ಮುರ್ತುಜಾ ಡಾಲಾಯತ, ಮುದಿಯಪ್ಪ ಮುಧೋಳ, ವೆಂಕಟೇಶ ಮುದಗಲ್, ವೀರಪ್ಪ ಪಟ್ಟಣಶೆಟ್ಟಿ, ಲಕ್ಷಿö್ಮÃ ಮುಧೋಳ, ಮುತ್ತಣ್ಣ ಮ್ಯಾಗೇರಿ, ರಫೀಕ್ ತೋರಗಲ್, ಬಸವರಾಜ ಹೂಗಾರ, ದ್ರಾಕ್ಷಾಯಿಣಿ ಚೋಳಿನ, ಲೀಲಾ ಸವಣೂರ, ದೀಪಾ ಗೌಡರ ಮುಂತಾದವರಿದ್ದರು.
ಪಟ್ಟಣದ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸಲು, 7 ಶುದ್ಧ ಕುಡಿಯುವ ನೀರಿನ ಘಟಕಗಳ ವಾರ್ಷಿಕ ನಿರ್ವಹಣೆಗೆ ಟೆಂಡರ್, ಠರಾವ್ ಸಂಖ್ಯೆ 89ರಲ್ಲಿ ಎಸ್‌ಎಪ್‌ಸಿ ರೂ.24.10 ಯೋಜನೆಯ 2017-18 & 2018-19ನೇ ಸಾಲಿನಲ್ಲಿ ಉಳಿಕೆ ಮೊತ್ತಕ್ಕೆ ಪ.ಪಂಗಡ ಜನಾಂಗದವರಿಗೆ ಸಣ್ಣ ಉದ್ಯಮ ನಡೆಸಲು ಸಹಾಯಧನಕ್ಕೆ ಪರಿಷ್ಕೃತ ಕ್ರಿಯಾ ಯೋಜನೆ ತಯಾರಿಸಲು, ಬೀದಿ ದೀಪ ನಿರ್ವಹಣೆ, ಬೀದಿ ದನ ಹಾಗೂ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮತ್ತು ತೆರವುಗೊಳಿಸಲು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗೆ, ಮಹಾವೀರ ಜೈನ ಸಮುದಾಯ ಭವನಕ್ಕೆ ನಿವೇಶನ ಒದಗಿಸಲು, ತಾ.ಪಂ ಕಟ್ಟಡ ನಿರ್ಮಾಣಕ್ಕೆ ಜಾಗ, ರೋಣದಿಂದ ಗಜೇಂದ್ರಗಡ ತಾಲೂಕಿಗೆ ಸ್ಥಳಾಂತರವಾದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಖಾಲಿ ನಿವೇಶನ ನೀಡಲು, ಪಟ್ಟಣದ ೩ ರಸ್ತೆಗಳಲ್ಲಿ ಸ್ವಾಗತ ಬಾಗಿಲು ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.