ವಿಜಯಸಾಕ್ಷಿ ಸುದ್ದಿ, ಡಂಬಳ: ನಮ್ಮ ದೇಶ ಸಾವಿರಾರು ದೇವರನ್ನು ಪೂಜಿಸುವ, ಆರಾಧಿಸುವ ಸಂಸ್ಕೃತಿ, ಪರಂಪರೆ, ಶ್ರೇಷ್ಠತೆಯ ಪ್ರತೀಕವಾಗಿದೆ. ಆ ಹಿನ್ನೆಲೆಯಲ್ಲಿ ಅಭಿವೃದ್ಧಿ ಜೊತೆಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಶಿವಾಜಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಯೋಜನೆಯಡಿಯಲ್ಲಿ ಲೋಕಾಮಸಂದ ದೇವಸ್ಥಾನದ ಕಾಮಗಾರಿ, ಶ್ರೀ ಸೇವಾಲಾಲ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ, ಗುರೇಶ ಲಕ್ಕವ್ವ ದೇವಸ್ಥಾನದ ಜೀರ್ಣೋದ್ಧಾರ, ಗಿರೀಶ್ ಸೋಮಲಪ್ಪ ನಾಯಕ ಇವರ ಮನೆಯಿಂದ ಚಂದ್ರು ಲಾಲಪ್ಪ ನಾಯಕ ಇವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆಗುಂದದೆ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ 56 ಸಾವಿರ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 600 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
ಮುಂದೆ ಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಈಶಪ್ಪ ಓಲಿ, ಮುಖಂಡರಾದ ಮಹೇಶ ಗಡಗಿ, ಕುಬೇರ ನಾಯಕ, ಬಸವರಡ್ಡಿ ಬಂಡಿಹಾಳ, ಗೋಪಾಲ ಲಮಾಣಿ, ಬಾಬುಸಾಬ ಮೂಲಿಮನಿ, ಮಲ್ಲಿಕಾರ್ಜುನ ಪ್ಯಾಟಿ, ತೇಜಪ್ಪ ರಾಮಚಂದ್ರಪ್ಪ, ಗೋವಿಂದ ಲಮಾಣಿ, ನಾಗರಾಜ ಸಜ್ಜನ, ಶರಣಪ್ಪ ಚೆನ್ನಳ್ಳಿ, ಆನಂದ ಲಮಾಣಿ, ಕುಬೇರ ಲಮಾಣಿ, ಶಿವಪ್ಪ ನಾಯಕ, ಮಲ್ಲೇಶ ಲಮಾಣಿ, ಸಂತೋಷ ಲಮಾಣಿ, ಠಾಕೋರ ಲಮಾಣಿ, ಶಂಕ್ರಪ್ಪ ಲಮಾಣಿ, ಗಂಗಪ್ಪ ಲಮಾಣಿ, ಸೋಮು ನಾಯಕ ತಹಸೀಲ್ದಾರ ಯರಿಸ್ವಾಮಿ, ಸಿಪಿಐ ಯಶವಂತ ಬಿಸನಳ್ಳಿ, ಜಿ.ಪಂ ಕಾರ್ಯನಿರ್ವಾಹಕ ಅಭಿಯಂತರ ನರಲೇಕರ, ಆರ್‌ಡಬ್ಲುಎಸ್ ಮಂಜುನಾಥ ಕಲಬುರ್ಗಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.
ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಓಡಾಡಬಹುದಾಗಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಕಲ್ಪಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ರ ನೇತೃತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



