ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಅತಿ ಮುಖ್ಯ ಅಂಗವಾಗಿದೆ. ಕಣ್ಣಿನ ಆರೋಗ್ಯ ಕಾಳಜಿಯಿಂದ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಜ್ಯೋತಿ ನರ್ಸಿಂಗ್ ಹೋಮ್‌ನಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಲಕ್ಷ್ಮೇಶ್ವರ ತಾಲೂಕಾ ವೈದ್ಯರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಪುರಸಭೆ, ವಿಶ್ವ ಕಂಪ್ಯೂಟರ್ ಅಕಾಡೆಮಿ, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಔಷಧ ವ್ಯಾಪಾರಸ್ಥರ ಸಂಘ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ದೃಷ್ಟಿದೋಷ ಉಂಟಾದ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡು ವೈದ್ಯರ ಸಲಹೆಯನ್ನು ತಪ್ಪದೇ ಪಾಲಿಸಬೇಕು. ಗ್ರಾಮೀಣ ಭಾಗದ ಬಡವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡುತ್ತಿರುವ ವೈದ್ಯರು, ಸಂಘಟನೆಗಳ ಸೇವಾ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಪ್ರೇರಣೆಯಾಗಿದೆ ಎಂದರು.
ಧರ್ಮಸ್ಥಳ ಸಂಘದ ಯೋಜನಾದಿಕಾರಿ ಪುನೀತ್ ಓಲೇಕಾರ ಮಾತನಾಡಿ, ನೇತ್ರದಾನ ಮಹಾದಾನವಾಗಿದ್ದು, ನಾವು ಅಳಿದ ಮೇಲೆ ಮತ್ತೊಬ್ಬರಿಗೆ ದಾನ ಮಾಡುವ ಮೂಲಕ ಮಾನವೀಯತೆ ತೋರಬೇಕಾಗಿದೆ. ನಮ್ಮ ಸಮಾಜದಲ್ಲಿ ಕಣ್ಣು ಇಲ್ಲದೆ ಬಳಲುತ್ತಿರುವ ಸಾವಿರಾರು ಜನರಿದ್ದಾರೆ. ಅಂತವರಿಗೆ ಕಣ್ಣು ದಾನ ಮಾಡುವ ಮೂಲಕ ಅವರಿಗೆ ಬೆಳಕಾಗುವ ಕಾರ್ಯ ಮಾಡಲು ನಮ್ಮ ನೇತ್ರವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಡಾ. ಪಿ.ಡಿ. ತೋಟದ, ವಿಶ್ವ ಅರೋಗ್ಯ ಸಂಸ್ಥೆಯ ತಾಲೂಕಾಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ, ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರ ಸಂಘ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಡಾ. ಪ್ರಸನ್ನ ಕುಲಕರ್ಣಿ, ಎನ್.ವಿ. ಹೇಮಗಿರಿಮಠ, ಡಾ. ಶರಣಪ್ಪ ಬಿಂಕದಕಟ್ಟಿ, ಡಾ. ಎಮ್.ಆರ್. ಕಲಿವಾಳಮಠ, ಡಾ. ದೀಪಾ ಬಿಂಕದಕಟ್ಟಿ, ಡಾ. ನಾಗರಾಜ ವಾಲಿ, ಡಾ. ಎಸ್.ಜಿ. ಹೂವಿನ, ಡಾ. ಎ.ಎಚ್. ಅಮರಶೆಟ್ಟಿ, ಪ್ರಕಾಶ ಉಪನಾಳ, ಗೌರಿ ಸಂಗಪ್ಪ ಶೆಟ್ಟರ, ಧರ್ಮಸ್ಥಳ ಸಂಘ ಮೇಲ್ವಿಚಾರಕರಾದ ಶ್ರುತಿ, ರೇಣುಕಾ, ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಇದ್ದರು.
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ. ನಿತೇಶ ಅವರನ್ನೊಳಗೊಂಡ 10 ಸಹಾಯಕ ವೈದರ ತಂಡ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು. ನೇತ್ರದೋಷವುಳ್ಳ ಒಟ್ಟು 310 ಜನರು ತಪಾಸಣೆಗೊಂಡರು. ಅದರಲ್ಲಿ 42 ಜನ ದೃಷ್ಟಿದೋಷವುಳ್ಳವರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.