ಬೀದರ್:ಜಿಲ್ಲಾತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ವೇಳೆ ಶಾಸಕ ಸಿದ್ದು ಪಾಟೀಲ್ ಮತ್ತು ಎಂಎಲ್ಸಿ ಭೀಮರಾವ್ ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿದ್ದ ವೇಳೆ, ಸಭೆಯ ಆರಂಭದಲ್ಲೇ ಲೇಔಟ್ ವಿಚಾರವಾಗಿ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಪರಿಷತ್ ಬಿಜೆಪಿ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ವಾಗ್ವಾದ ತೀವ್ರಗೊಂಡಾಗ ಪರಸ್ಪರ ಅವಾಚ್ಯ ಪದ ಬಳಸಿ ನಿಂದನೆ ನಡೆಸಿದ್ದು, ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹರಸಾಹಸ ಪಟ್ಟರು. ಈ ವೇಳೆ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಮಧ್ಯಪ್ರವೇಶಿಸಿ ಭೀಮರಾವ್ ಪಾಟೀಲ್ ಬೆಂಬಲಕ್ಕೆ ನಿಂತರು. ಬಳಿಕ ಸಭೆಯನ್ನು ಶಾಂತಗೊಳಿಸಿ ಮುಂದುವರಿಸಲಾಯಿತು.



