ತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳ ಯುವಕರಿಗೆ ಮದುವೆ ಸಾಧ್ಯವಾಗದ ಸ್ಥಿತಿ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮೂಡಿದೆ. ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಸಂಕಷ್ಟವನ್ನು ಉಲ್ಲೇಖಿಸಿದ್ದಾರೆ.
ತಾಲ್ಲೂಕಿನ ಬಹುಪಾಲು ಯುವಕರು ಕೃಷಿ ಅವಲಂಬಿತ ಜೀವನ ನಡೆಸುತ್ತಿದ್ದರೂ, ಹೆಣ್ಣುಮಕ್ಕಳು ನಗರ ಪ್ರದೇಶದ ಸರ್ಕಾರಿ ನೌಕರರು ಅಥವಾ ಸ್ಥಿರ ಉದ್ಯೋಗ ಹೊಂದಿದವರನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ರೈತಾಪಿ ಕುಟುಂಬಗಳ ಯುವಕರ ವಿವಾಹ 30 ವರ್ಷ ದಾಟಿದರೂ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಶಾಸಕರು, ಕೃಷಿಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ವಿಶೇಷ ಭತ್ಯೆ ಮತ್ತು ವಿಶೇಷ ಸ್ಥಾನಮಾನ ನೀಡುವ ಯೋಜನೆಯನ್ನು ಮುಂಬರುವ ಅಧಿವೇಶನದಲ್ಲಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಇದೇ ವಿಚಾರವನ್ನು ಎತ್ತಿ ಹಿಡಿದು, ರೈತ ಹಾಗೂ ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವವರಿಗೆ 10 ಲಕ್ಷ ಠೇವಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು.
ಗ್ರಾಮೀಣ ಸಮಾಜದಲ್ಲಿ ಮೂಡುತ್ತಿರುವ ಈ ಹೊಸ ಮದುವೆ ಸಂಕಷ್ಟದ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಗಮನಾರ್ಹ ವಿಷಯವಾಗಿದೆ.



