ರಾಮನಗರ:- ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ವಿರುದ್ಧವೇ ಶಾಸಕ ಶಿವಲಿಂಗೇಗೌಡರು ಬೈದ ಪ್ರಸಂಗ ಜರುಗಿದೆ.
ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಜೆಡಿಎಸ್- ಬಿಜೆಪಿ ಪಕ್ಷದವರಿಗೆ ತಿರುಗೇಟು ನೀಡಲು ಕಾಂಗ್ರೆಸ್ನಿಂದ ಚನ್ನಪಟ್ಟಣದಲ್ಲಿ ಜನಾಂದೋಲನ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಬಿಜೆಪಿ ಹಾಗೂ ಕಾಂಗ್ರೆಸ್ನವರಿಗೆ ಮಾನ ಮರ್ಯಾದೆ, ತಾಕತ್ತು ಇದ್ರೆ, ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಿ ಎಂದರು. ಬಾಯ್ತಪ್ಪಿ ಕಾಂಗ್ರೆಸ್ಗೆ ಬೈದಿರುವುದು ಗೊತ್ತಾದ ಮೇಲೆ, ಕ್ಷಮಿಸಿ ಜೆಡಿಎಸ್ – ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಎಂದಿದ್ದಾರೆ.
ಪಾದಯಾತ್ರೆ ಮೂಲಕ ರಾಜ್ಯದ ಜನರಿಗೆ ಸುಳ್ಳು ಹೇಳಲು ಬಿಜೆಪಿಯವರು ಹೊರಟಿದ್ದಾರೆ. ಜೆಡಿಎಸ್- ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡು ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಮರೆತು ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಬಿಜೆಪಿ ಅವರ ಪಾದದಡಿಯಲ್ಲಿ ಜೆಡಿಎಸ್ನವರು ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಕಳಂಕ ತರಬೇಕು ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಸ್ವಚ್ಛತೆ, ಪ್ರಾಮಾಣಿಕತೆ ಇಟ್ಟುಕೊಂಡು ಇಷ್ಟು ವರ್ಷ ಸಿದ್ದರಾಮಯ್ಯ ರಾಜಕೀಯ ಮಾಡಿದ್ದಾರೆ. ಮೈಸೂರಿಗೆ ಹೋಗೊ ವರೆಗೂ ಇದೇ ರೀತಿ ಸಮಾವೇಶ ಮಾಡುತ್ತೇವೆ ಎಂದರು. ಈ ವೇಳೇ ಬಾಯ್ತಪ್ಪಿ ಬಿಜೆಪಿ ಹಾಗೂ ಕಾಂಗ್ರೆಸ್ನವರಿಗೆ ಮಾನ ಮರ್ಯಾದೆ, ತಾಕತ್ತು ಇದ್ರೆ, ನಾವು ಕೇಳೊ ಪ್ರಶ್ನೆಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ನಂತರ ಕ್ಷಮಿಸಿ, ಜೆಡಿಎಸ್ – ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.