ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ನಟ ದರ್ಶನ್ ಗ್ಯಾಂಗ್ ನಿಂದ ಹಿಂಸಾತ್ಮಕವಾಗಿ ಮೃತಪಟ್ಟ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ಇದೀಗ ಆಧಾರವೇ ಇಲ್ಲವಾಗಿದೆ. ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುತ್ತಿದೆ. ವಯಸ್ಸಾದ ತಂದೆ, ತಾಯಿ, ಸಣ್ಣ ಮಗುವನ್ನು ಇಟ್ಟುಕೊಂಡು ರೇಣುಕಾಸ್ವಾಮಿ ಪತ್ನಿ ಮುಂದಿನ ಜೀವನದ ಬಗ್ಗೆ ಚಿಂತೆಗೀಡಾಗಿದ್ದಾರೆ. ಇದೀಗ ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸೋದಾಗಿ ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದಾರೆ.
ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ ಅವರು ಮೃತ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಕುಟುಂಬಕ್ಕೆ ತಾತ್ಕಾಲಿಕವಾಗಿ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ, ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ.
ಮುರುಘಾಮಠದ ಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಅವರಿಗೆ ಕರೆಮಾಡಿ, ಮಠದ ಸಂಸ್ಥೆಯಲ್ಲಿ ಸಹನಾಗೆ ಉದ್ಯೋಗ ನೀಡುವಂತೆ ರಘುಮೂರ್ತಿ ಮನವಿ ಮಾಡಿದ್ದಾರೆ. ಸಿರಿಗೆರೆ ತರಳಬಾಳು ಮಠದ ಸಂಸ್ಥೆಯಲ್ಲಿಯೂ ಅವಕಾಶ ಹುಡುಕಲು ಸಲಹೆ ನೀಡಿದ್ದಾರೆ. ಇನ್ನು, ಕೊನೆಯ ಪಕ್ಷ ಸರ್ಕಾರಿ ಅನುದಾನಿತ ಸಂಸ್ಥೆಯಲ್ಲಿ ಕ್ಲರ್ಕ್ ಪೋಸ್ಟ್ ಕೊಡಿಸೋದಾಗಿ ಭರವಸೆ ಕೊಟ್ಟಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ಶಾಸಕ ರಘುಮೂರ್ತಿ ಮನೆಗೆ ಬಂದಿದ್ದರು. ಅವರು ನಮ್ಮ ಕಷ್ಟ ಕೇಳಿದ್ದಾರೆ. ರಘುಮೂರ್ತಿ 1ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಸೊಸೆ ಸಹನಾಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.