ಬೆಂಗಳೂರು:- ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ಮೊಬೈಲ್ ಬ್ಯಾನ್ ವಿಚಾರವಾಗಿ ಮುಖ್ಯಮಂತ್ರಿಗಳು ವಿಸಿಗಳಿಂದಲೂ ಅಭಿಪ್ರಾಯ ಕೇಳಿದ್ದು, ಪ್ರಸ್ತಾಪಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಿಂದಲೂ ಒಪ್ಪಿಗೆ ಸಿಕ್ಕಿದೆ. ಸೋಷಿಯಲ್ ಮೀಡಿಯಾಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪ ಹಿನ್ನೆಲೆ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ ಇದೆ ಎನ್ನಲಾಗಿದೆ.
ಇದಲ್ಲದೆ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳನ್ನು ಮಾದಕವಸ್ತು ಮುಕ್ತಗೊಳಿಸಲು ಸಿಎಂ ಸೂಚಿಸಿದ್ದು, ವಿದ್ಯಾರ್ಥಿ ಚುನಾವಣೆಗಳ ಪುನರಾರಂಭದ ಕುರಿತೂ ಚರ್ಚೆ ನಡೆಸಿದ್ದಾರೆ. ಡ್ರಗ್ಸ್ ಒಂದು ಪಿಡುಗಾಗಿದ್ದು, ವಿಶ್ವವಿದ್ಯಾಲಯಗಳ ಕಾಂಪಸ್ಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ವಿಸಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ಟೂಡೆಂಟ್ ಎಲೆಕ್ಷನ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ನಮ್ಮ ಕಾಲದಲ್ಲಿ ಚುನಾವಣೆ ಇತ್ತು, ನಾವು ಅಲ್ಲಿಂದಲೇ ಬಂದಿರುವುದು. ಹೀಗಾಗಿ ಷರತ್ತುಗಳನ್ನು ಹಾಕಿ ಚುನಾವಣೆಗೆ ಅವಕಾಶ ಕೊಡಲು ಚಿಂತನೆ ಇದೆ. ಚುನಾವಣೆ ಆಗದಿದ್ರೆ ವಿದ್ಯಾರ್ಥಿಗಳು ನಾಯಕರಾಗಿ ಹೇಗೆ ಬೆಳೆಯೋದು? ಭಾರತದಲ್ಲಿ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದ ಸಿಎಂ, ಈ ಬಗ್ಗೆ ಸಲಹೆ ಕೊಡುವಂತೆ ವಿಸಿಗಳಿಗೆ ಸೂಚಿಸಿದ್ದಾರೆ.



