ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಲಿ ಮೊಬೈಲ್ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕುವ ಕಾರ್ಯವಾಗುತ್ತಿದೆ. ವಿದ್ಯಾರ್ಥಿಗಳು ಮೋಬೈಲ್‌ಗಳನ್ನು ಕೈಬಿಟ್ಟು ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಅದರಲ್ಲಿ ಸಾಧನೆ ಮಾಡಬಹುದು ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.
ಅವರು ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಲಕ್ಷ್ಮೇಶ್ವರ ಗ್ರೂಪ್ ನಂಬರ್-2ರ ಗ್ರೂಪ್ ಮಟ್ಟದ ಇಲಾಖೆ ಕ್ರೀಡಾಕೂಟದಲ್ಲಿ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿ ಮಾತನಡಿದರು.
ನಿಜವಾದ ಕ್ರೀಡಾಪಟು ಎಂದೂ ಕೆಟ್ಟ ನಾಗರಿಕ ಆಗಲಾರ. ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದು ಕರೆನೀಡಿದರು.
ಒಲಿಂಪಿಕ್ ಕ್ರೀಡಾ ಜ್ಯೋತಿಯನ್ನು ಈಶ್ವರ ಮೆಡ್ಲೇರಿ ಸ್ವೀಕರಿಸಿದರು. ದಿಗಂಬರ ಪೂಜಾರ ಕ್ರೀಡಾ ಜ್ಯೋತಿ ಬೆಳಗಿಸಿದರು. ಚಂದ್ರು ನೇಕಾರ ಗುಂಡು ಎಸೆಯುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಮಾಗಡಿ ವಹಿಸಿದ್ದರು. ಅತಿಥಿಗಳಾಗಿ ಎಲ್.ಎ. ನಡುವಿನಮನಿ, ಬಿ.ಎಮ್. ಕುಂಬಾರ, ಸತೀಶ್ ಬೋಮಲೆ, ಉಮೇಶ್ ನೇಕಾರ, ಡಿ.ಡಿ. ಲಮಾಣಿ, ಎಸ್.ಕೆ. ಹವಾಲ್ದಾರ, ಎನ್.ಪಿ. ಪ್ಯಾಟಿಗೌಡರ, ಆರ್.ಎಂ. ಶಿರಹಟ್ಟಿ, ಆರ್.ಬಿ. ಮಾಂಡ್ರೆ ಇದ್ದರು. ಚನ್ನಪ್ಪ ಜಗಲಿ, ರಮೇಶ್ ಹಾಳದೋಟದ, ಎಮ್.ಎಮ್. ಕಳಸೂರ ಪ್ರಾಯೋಜಕತ್ವ ವಹಿಸಿದ್ದರು. ಎಚ್.ಡಿ. ನಿಂಗರೆಡ್ಡಿ ನಿರೂಪಿಸಿದರು.