ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ ಬಹಿರಂಗವಾಗಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮಗಳಿಂದ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದ್ದರೂ, ಈ ಘಟನೆ ಮತ್ತೆ ಆತಂಕ ಹುಟ್ಟಿಸಿದೆ. ವೈರಲ್ ವಿಡಿಯೋದಲ್ಲಿ ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್ಫ್ಲಿಕ್ಸ್ ಸೌಲಭ್ಯಗಳಿರುವುದಾಗಿ ಹೇಳಲಾಗಿದೆ.
ವಿಡಿಯೋ ವೈರಲ್ ಆದ ತಕ್ಷಣ ಅಧಿಕಾರಿಗಳು ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, 9ನೇ ಬ್ಯಾರಕ್ನ ಡ್ರೈನೇಜ್ ಮಾರ್ಗದಲ್ಲಿ ಹಾಲಿನ ಪ್ಯಾಕೆಟ್ಗಳಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ.
ತನಿಖೆಯಲ್ಲಿ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರು ಬೇರೆ ಬ್ಯಾರಕ್ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರನ್ನು ಬಳಸಿಕೊಂಡು ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನೂ ಕ್ವಾರಂಟೈನ್ ಸೆಲ್ಗೆ ಸ್ಥಳಾಂತರಿಸಲಾಗಿದೆ.
ಘಟನೆ ಬೆನ್ನಲ್ಲೇ ವಾರ್ಡರ್ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.



